ರಿಯಾ ಅರ್ಜಿಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಿದ ನಟನ ತಂದೆ

Update: 2020-08-08 17:17 GMT

ಹೊಸದಿಲ್ಲಿ,ಆ.8: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಬೆಳವಣಿಗೆಯಾಗಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ನಟನ ತಂದೆ ಕೆ.ಕೆ.ಸಿಂಗ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಕೌಂಟರ್ ಅಫಿಡವಿಟ್‌ನ್ನು ಸಲ್ಲಿಸಿದ್ದಾರೆ.

ಸಿಂಗ್ ಅವರು ಪಾಟ್ನಾದಲ್ಲಿ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಳಿಕ ರಿಯಾ ತನಿಖೆಯನ್ನು ಮುಂಬೈಗೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದರು. ಇದನ್ನು ವಿರೋಧಿಸಿ ಸಲ್ಲಿಸಿರುವ ಕೌಂಟರ್ ಅಫಿಡವಿಟ್‌ನಲ್ಲಿ ಸಿಂಗ್,ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐಗೆ ವರ್ಗಾಯಿಸಿರುವುದರಿಂದ ರಿಯಾ ಅರ್ಜಿ ನಿರರ್ಥಕವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಶಂಕಿತೆಯಾಗಿರುವ ರಿಯಾ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಸಿದ್ಧಾರ್ಥ ಪಿಥಾನಿಯವರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿರುವ ಸಿಂಗ್,ಪಿಥಾನಿ ಬಿಹಾರ ಪೊಲೀಸರ ವಿರುದ್ಧ ದೂರಿಕೊಂಡು ಮುಂಬೈ ಪೊಲೀಸರಿಗೆ ಕಳುಹಿಸಿದ್ದ ಇ-ಮೇಲ್ ರಿಯಾ ಕೈ ಸೇರಿದ್ದು ಹೇಗೆ ಎಂದೂ ಪ್ರಶ್ನಿಸಿದ್ದಾರೆ. ಬಿಹಾರ ಪೊಲೀಸರು ರಿಯಾ ವಿರುದ್ಧ ಎಫ್‌ಐಆರ್‌ನ್ನು ದಾಖಲಿಸಿಕೊಂಡ ಬಳಿಕ ಮತ್ತು ಆಕೆ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮುನ್ನಾ ದಿನ ಪಿಥಾನಿ ಈ ಮೇಲ್‌ನ್ನು ರವಾನಿಸಿದ್ದರು ಎಂದೂ ಸಿಂಗ್ ಆರೋಪಿಸಿದ್ದಾರೆ.

ತನ್ನ ಮಗನ ಶೋಷಣೆ ಮತ್ತು ಆತ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕಾಗಿ ಸಿಂಗ್ ರಿಯಾ ಮತ್ತು ಇತರ ಐವರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದಾರೆ. ಜಾರಿ ನಿರ್ದೇಶನಾಲಯವು ಶುಕ್ರವಾರ ರಿಯಾ,ಆಕೆಯ ಸೋದರ ಮತ್ತು ಮಾಜಿ ಮ್ಯಾನೇಜರ್ ಅವರನ್ನು ಎಂಟು ಗಂಟೆಗಳ ಕಾಲ ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News