ಕೋವಿಡ್-19: ದೇಶದಲ್ಲಿ ಸತತ ನಾಲ್ಕನೇ ದಿನವೂ ಅಮೆರಿಕ, ಬ್ರೆಝಿಲ್‌ಗಿಂತ ಹೆಚ್ಚಿನ ಹೊಸ ಪ್ರಕರಣಗಳು ದಾಖಲು

Update: 2020-08-08 17:34 GMT

ಹೊಸದಿಲ್ಲಿ,ಆ.8: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 61,537 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 20,88,611ಕ್ಕೇರಿದೆ. ಇದೇ ಅವಧಿಯಲ್ಲಿ 933 ರೋಗಿಗಳು ಮೃತಪಟ್ಟಿದ್ದು,ಈವರೆಗೆ ವರದಿಯಾಗಿರುವ ಕೋವಿಡ್-19 ಸಂಬಂಧಿತ ಸಾವುಗಳ ಸಂಖ್ಯೆ 42,518ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ಬೆಳಿಗ್ಗೆ ಪ್ರಕಟಿಸಿದೆ.

 ಸಾಂಕ್ರಾಮಿಕ ಪಿಡುಗು ಆರಂಭಗೊಂಡಾಗಿನಿಂದ 14.27 ಲ.ಕ್ಕೂ ಅಧಿಕ ರೋಗಿಗಳು ಚೇತರಿಸಿಕೊಂಡಿದ್ದು,ಚೇತರಿಕೆ ದರವು ಶನಿವಾರ ಬೆಳಿಗ್ಗೆ ಶೇ.68.32ರಷ್ಟಿದೆ. ಶುಕ್ರವಾರ ಇದು ಶೇ.67.98ರಷ್ಟಿತ್ತು ಎಂದು ಅದು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಭಾರತವು ಸತತ ನಾಲ್ಕನೇ ದಿನವಾದ ಶುಕ್ರವಾರವೂ ವಿಶ್ವಾದ್ಯಂತ ಒಂದೇ ದಿನದಲ್ಲಿ ಅತ್ಯಂತ ಹೆಚ್ಚಿನ ಕೊರೋನ ವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಶುಕ್ರವಾರ 62,538 ಹೊಸ ಪ್ರಕರಣಗಳು ವರದಿಯಾಗಿದ್ದರೆ,ಗುರುವಾರ 56,282,ಬುಧವಾರ 52,509 ಮತ್ತು ಮಂಗಳವಾರ 52,050 ಹೊಸ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದವು. ಭಾರತಕ್ಕಿಂತ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ಅಮೆರಿಕ ಮತ್ತು ಬ್ರಾಝಿಲ್‌ಗಳು ಈ ಎಲ್ಲ ನಾಲ್ಕೂ ದಿನಗಳಲ್ಲಿ ಇದಕ್ಕಿಂತ ಕಡಿಮೆ ಸಂಖ್ಯೆಗಳಲ್ಲಿ ಹೊಸ ಪ್ರಕರಣಗಳನ್ನು ವರದಿ ಮಾಡಿವೆ. ಭಾರತದಲ್ಲಿ ಶನಿವಾರ ಸತತ ಎರಡನೇ ದಿನವೂ 60,000ಕ್ಕಿಂತ ಅಧಿ ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದೊಂದು ವಾರಕ್ಕಿಂತ ಅಧಿಕ ಸಮಯದಿಂದ ದೇಶದಲ್ಲಿ ಪ್ರತಿದಿನ 50,000ಕ್ಕೂ ಹೆಚ್ಚಿನ ಹೊಸ ಪ್ರಕರಣಗಳು ವರದಿಯಾಗುತ್ತಿವೆ.

 ಮಹಾರಾಷ್ಟ್ರ (4.9 ಲಕ್ಷ),ತಮಿಳುನಾಡು (2.85 ಲ.),ಆಂಧ್ರಪ್ರದೇಶ (2.06 ಲ.),ಕರ್ನಾಟಕ (1.64 ಲ.), ದಿಲ್ಲಿ (1.42 ಲ.),ಉತ್ತರ ಪ್ರದೇಶ (1.13 ಲ.),ಪ.ಬಂಗಾಳ (89,660),ತೆಲಂಗಾಣ (77,513),ಬಿಹಾರ (71,304) ಮತ್ತು ಗುಜರಾತ (68,000)ಇವು ಅತ್ಯಂತ ಹೆಚ್ಚಿನ ಕೋವಿಡ್-19 ಪ್ರಕರಣಗಳು ದಾಖಲಾಗಿರುವ ರಾಜ್ಯಗಳಾಗಿವೆ. ಮಹಾರಾಷ್ಟ್ರ (10,483),ಆಂಧ್ರಪ್ರದೇಶ (10,171),ಕರ್ನಾಟಕ (6,670),ತಮಿಳುನಾಡು (5,880) ಮತ್ತು ಉತ್ತರ ಪ್ರದೇಶ (4.404) ಕಳೆದ 24 ಗಂಟೆಗಳಲ್ಲಿ ಅತ್ಯಂತ ಹೆಚ್ಚಿನ ಹೊಸ ಪ್ರಕರಣಗಳು ದಾಖಲಾಗಿರುವ ಐದು ರಾಜ್ಯಗಳಾಗಿವೆ. ಈ ಐದು ರಾಜ್ಯಗಳು ಈ ಅವಧಿಯಲ್ಲಿ ಅತ್ಯಧಿಕ ಕೋವಿಡ್ ಸಂಬಂಧಿತ ಸಾವುಗಳನ್ನೂ ದಾಖಲಿಸಿವೆ. ಶನಿವಾರ ದೇಶದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.10.28ರಷ್ಟಿದ್ದರೆ ಶುಕ್ರವಾರ ಬೆಳಿಗ್ಗೆ ಅದು ಶೇ.10.88ರಷ್ಟಿತ್ತು. ಸುಮಾರು 138 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಈವರೆಗೆ 2.33 ಕೋಟಿಗೂ ಅಧಿಕ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಶುಕ್ರವಾರ ದೇಶಾದ್ಯಂತ 5.98 ಲ. ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ವಿಶ್ವಾದ್ಯಂತ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 1.93ಕ್ಕೇರಿದ್ದು,7.21 ಲ.ಜನರು ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಅತ್ಯಂತ ಹೆಚ್ಚಿನ ಪ್ರಕರಣಗಳು (49 ಲ.ಕ್ಕೂ ಅಧಿಕ) ದಾಖಲಾಗಿದ್ದರೆ,ಬ್ರಾಝಿಲ್ 29 ಲ.ಕ್ಕೂ ಅಧಿಕ ಪ್ರಕರಣಗಳೊಡನೆ ಎರಡನೇ ಸ್ಥಾನದಲ್ಲಿದೆ.

ವೈದ್ಯರ ಸಾವು: ಮೋದಿಗೆ ಐಎಂಎ ಮನವಿ

ದೇಶದಲ್ಲಿ ಈವರೆಗೆ 196 ವೈದ್ಯರು ಕೊರೋನ ವೈರಸ್‌ಗೆ ಬಲಿಯಾಗಿದ್ದ್ದಾರೆಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ)ವು ಶನಿವಾರ ತಿಳಿಸಿದೆ.

ಈ ವಿಷಯದ ಬಗ್ಗೆ ಗಮನ ಹರಿಸುವಂತೆ ಅದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News