​ಮುಂದಿನ 45 ದಿನ ಕೋವಿಡ್ ಸೋಂಕು ಪರೀಕ್ಷೆ ಇಳಿಕೆ ಇಲ್ಲ : ಕೇಂದ್ರ ಆರೋಗ್ಯ ಸಚಿವಾಲಯ

Update: 2020-08-10 04:10 GMT

ಹೊಸದಿಲ್ಲಿ: ದೇಶದಲ್ಲಿ ದೈನಂದಿನ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ ದಾಖಲೆ 7.2 ಲಕ್ಷಕ್ಕೆ ಏರಿದ್ದು, ಅಧಿಕ ತಪಾಸಣೆಯಿಂದಾಗಿ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಮುಂದಿನ ಸುಮಾರು 45 ದಿನ ದೇಶದಲ್ಲಿ ಇದೇ ಪ್ರವೃತ್ತಿ ಮುಂದುವರಿಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಹೆಚ್ಚು ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ರೋಗ ನಿಭಾಯಿಸುವುದು ಸುಲಭವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ದ್ವಿಗುಣಗೊಳ್ಳಲು ಸುಮಾರು 20 ದಿನಗಳಾಗುತ್ತಿರುವುದರಿಂದ ವೈದ್ಯಕೀಯ ಸೌಲಭ್ಯಗಳಿಗೆ ಹೆಚ್ಚಿನ ಹೊರೆಯಾಗುತ್ತಿಲ್ಲ. ಇದೀಗ ಅಧಿಕ ಪ್ರಕರಣಗಳು ವರದಿಯಾಗುತ್ತಿರುವ 2 ಮತ್ತು 3ನೇ ಸ್ತರದ ನಗರ ಹಾಗೂ ಪಟ್ಟಣಗಳಿಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಂಥ ರಾಜ್ಯಗಳ ಜತೆ ಶ್ರಮಿಸುವ ಮೂಲಕ ಕಂಟೈನ್ಮೆಂಟ್ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ. ಇಲ್ಲಿ ವೈರಸ್ ಸೋಂಕಿಗೆ ಒಳಗಾಗುವ ಅಪಾಯ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಪರೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಆ. 6ರಂದು 62,482ರಷ್ಟಿದ್ದ ದೈನಿಕ ಪ್ರಕರಣಗಳ ಸಂಖ್ಯೆ ಆ. 8ಕ್ಕೆ 65,140ಕ್ಕೇರಿದೆ. ಇದು ಕಡಿಮೆಯಾಗಲು ಇನ್ನೂ ಕೆಲ ವಾರಗಳು ಬೇಕಾಗಬಹುದು ಎಂದು ಹೇಳಿದ್ದಾರೆ.

ಇದುವರೆಗೆ ದೇಶಾದ್ಯಂತ 2.4 ಕೋಟಿ ತಪಾಸಣೆ ನಡೆಸಲಾಗಿದೆ. ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗಳನ್ನು ಹೆಚ್ಚಿಸಿರುವುದು ತ್ವರಿತ ಪತ್ತೆಗೆ ನೆರವಾಗುತ್ತಿದೆ. ಗರಿಷ್ಠ ಸಂಖ್ಯೆಯ ಅಂದರೆ ಒಂದೇ ದಿನ 53879 ಮಂದಿ ಗುಣಮುಖರಾಗಿ ಶನಿವಾರ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 14,80,884ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,28,747 ಇದೆ ಎಂದು ಆರೋಗ್ಯ ಸಚಿವಾಲಯ ಅಂಕಿ ಅಂಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News