ಭಾರತದ ಮಾಜಿ ಫುಟ್ಬಾಲ್ ಆಟಗಾರ ಮನಿಟೋಂಬಿ ಸಿಂಗ್ ನಿಧನ

Update: 2020-08-10 05:46 GMT

ಕೋಲ್ಕತಾ: ಭಾರತದ ಮಾಜಿ ಡಿಫೆಂಡರ್ ಹಾಗೂ ಮೋಹನ್ ಬಗಾನ್ ತಂಡದ ನಾಯಕ ಮನಿಟೋಂಬಿ ಸಿಂಗ್ ಮಣಿಪುರದ ಇಂಫಾಲ್ ಸಮೀಪದ ತನ್ನ ಹಳ್ಳಿಯಲ್ಲಿ ರವಿವಾರ ನಿಧನರಾದರು. ಅವರಿಗೆ 39 ವರ್ಷ ವಯಸ್ಸಾಗಿತ್ತು ಎಂದು ಫುಟ್ಬಾಲ್ ಕ್ಲಬ್ ಮೂಲಗಳು ತಿಳಿಸಿವೆ.

ದೀರ್ಘಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮನಿಟೋಂಬಿ ರವಿವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದರು. ಅವರು ಪತ್ನಿ ಹಾಗೂ 8 ವರ್ಷದ ಪುತ್ರನನ್ನು ಅಗಲಿದ್ದಾರೆ.

‘‘ಮಾಜಿ ಕ್ಲಬ್ ನಾಯಕ ಮನಿಟೋಂಬಿ ಸಿಂಗ್ ಅಕಾಲಿಕ ನಿಧನ ದಿಂದ ಮೋಹನ್ ಬಗಾನ್ ಪರಿವಾರ ತೀವ್ರ ದುಃಖಿತವಾಗಿದೆ. ಈ ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆ ಹಾಗೂ ಪ್ರಾರ್ಥನೆ ಅವರ ಕುಟುಂಬದೊಂದಿಗಿದೆ’’ ಎಂದು ಕ್ಲಬ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

2003ರಲ್ಲಿ ಹೊ ಚಿ ಮಿನ್ ಸಿಟಿಯಲ್ಲಿ ಸ್ಟೀಫನ್ ಕಾನ್‌ಸ್ಟನ್‌ಟೈನ್ ಮಾರ್ಗದರ್ಶನದ ಭಾರತದ ಅಂಡರ್-23 ತಂಡ ಎಲ್‌ಜಿ ಕಪ್ ಎತ್ತಿ ಹಿಡಿಯಲು ಮನಿಟೋಂಬಿ ಪ್ರಮುಖ ಪಾತ್ರವಹಿಸಿದ್ದರು. 1971ರಲ್ಲಿ ಸಿಂಗಾಪುರದಲ್ಲಿ 8 ದೇಶಗಳ ಟೂರ್ನಮೆಂಟ್‌ನಲ್ಲಿ ಜಯಶಾಲಿಯಾದ ಬಳಿಕ ಭಾರತ ಗೆದ್ದಂತಹ ಮೊದಲ ಅಂತರ್‌ರಾಷ್ಟ್ರೀಯ ಪ್ರಶಸ್ತಿ ಇದಾಗಿತ್ತು. 2002ರ ಬುಸಾನ್ ಏಶ್ಯನ್ ಗೇಮ್ಸ್ ನಲ್ಲಿ ಮನಿಟೋಂಬಿ ಭಾರತವನ್ನು ಪ್ರತಿನಿಧಿಸಿದ್ದರು.

 2003ರಲ್ಲಿ ಕೋಲ್ಕತಾ ಫುಟ್ಬಾಲ್ ಲೀಗ್ ಪ್ರೀಮಿಯರ್ ಡಿವಿಜನ್‌ನಲ್ಲಿ ಮೋಹನ್ ಬಗಾನ್ ಪರ ಆಡುವುದರೊಂದಿಗೆ ಫುಟ್ಬಾಲ್‌ಗೆ ಕಾಲಿಟ್ಟಿರುವ ಮನಿಟೋಂಬಿ 2004ರಲ್ಲಿ ಆಲ್ ಏರ್‌ಲೈನ್ಸ್ ಗೋಲ್ಡ್‌ಕಪ್ ಗೆಲುವಿನಲ್ಲಿ ತಂಡದ ನಾಯಕತ್ವವನ್ನು ವಹಿಸಿದ್ದರು.

ಆರ್ಮಿ ಬಾಯ್ಸ ಹಾಗೂ ಸರ್ವಿಸಸ್‌ನಲ್ಲಿ ಆಡುವುದರೊಂದಿಗೆ ತನ್ನ ವೃತ್ತಿಜೀವನ ಆರಂಭಿಸಿದ್ದ ಅವರು ಏರ್ ಇಂಡಿಯಾ ಹಾಗೂ ಸಲ್ಗಾಂವ್ಕರ್ ಕ್ಲಬ್‌ನ್ನು ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News