ಬಾರ್ಸಿಲೋನ ಕ್ವಾರ್ಟರ್ ಫೈನಲ್ ಗೆ ಲಗ್ಗೆ

Update: 2020-08-10 05:59 GMT

ಬಾರ್ಸಿಲೋನ: ಲಿಯೊನೆಲ್ ಮೆಸ್ಸಿ ನೇತೃತ್ವದ ಬಾರ್ಸಿಲೋನ ತಂಡ ಶನಿವಾರ ತವರು ನೆಲದಲ್ಲಿ ನಪೋಲಿ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿತು. 4-2 ಗೋಲುಗಳ ಸರಾಸರಿಯ ಆಧಾರದಲ್ಲಿ ಸತತ 13ನೇ ಬಾರಿ ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದ ಬಾರ್ಸಿಲೋನ ಅಂತಿಮ-8ರ ಸುತ್ತಿನಲ್ಲಿ ಬೆಯರ್ನ್ ಮ್ಯೂನಿಚ್ ತಂಡವನ್ನು ಎದುರಿಸಲಿದೆ.

ಬಾರ್ಸಿಲೋನ ನೀರಸ ಆರಂಭ ಪಡೆಯಿತು. ಆದಾಗ್ಯೂ 10ನೇ ನಿಮಿಷದಲ್ಲಿ ಕ್ಲೆಮೆಂಟ್ ಲೆಂಗ್ಲೆಟ್ ಅವರ ಶಕ್ತಿಶಾಲಿ ಹೆಡರ್‌ನ ನೆರವಿನಿಂದ ಬಾರ್ಸಿಲೋನ 1-0 ಮುನ್ನಡೆ ಗಳಿಸಿತು. 23ನೇ ನಿಮಿಷದಲ್ಲಿ ಗೋಲು ಗಳಿಸಿದ ಮೆಸ್ಸಿ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಉತ್ತಮ ಸಂಘಟಿತ ಪ್ರದರ್ಶನದಿಂದಾಗಿ ಮೆಸ್ಸಿ ಮತ್ತೊಮ್ಮೆ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಆದರೆ, ವಿಎಆರ್ ರಿವೀವ್‌ನಲ್ಲಿ ಅರ್ಜೆಂಟೀನದ ಮೆಸ್ಸಿ ಹ್ಯಾಂಡ್‌ಬಾಲ್ ಮಾಡಿರುವುದನ್ನು ಪರಿಗಣಿಸಿ ಗೋಲನ್ನು ನಿರಾಕರಿಸಲಾಯಿತು. ತನ್ನ ಛಲ ಬಿಡದ ಮೆಸ್ಸಿ ಆ ನಂತರ ಪೆನಾಲ್ಟಿ ಕಾರ್ನರ್‌ನ್ನು ಗೆದ್ದುಕೊಂಡರು. 46ನೇ ನಿಮಿಷದಲ್ಲಿ ಲೂಯಿಸ್ ಸುಯರೆಝ್ ಇದನ್ನು ಗೋಲಾಗಿ ಪರಿವರ್ತಿಸಿ ಬಾರ್ಸಿಲೋನದ ಖಾತೆಗೆ ಮೂರನೇ ಗೋಲು ಜಮೆ ಮಾಡಿದರು. ನಪೋಲಿ ಪರ ಮೊದಲಾರ್ಧದ ಅಂತ್ಯಕ್ಕೆ 48ನೇ ನಿಮಿಷದಲ್ಲಿ ಲೊರೆಂರೊ ಇನ್‌ಸಿಗ್ನೆ ಸ್ಪಾಟ್‌ಕಿಕ್‌ನ್ನು ಗೋಲಾಗಿ ಪರಿವರ್ತಿಸಿದರು. ಭರ್ಜರಿ ಜಯದೊಂದಿಗೆ ಕ್ವಾರ್ಟರ್ ಫೈನಲ್ ತಲುಪಿರುವ ಬಾರ್ಸಿಲೋನ ಶುಕ್ರವಾರ ಲಿಸ್ಬನ್‌ನಲ್ಲಿ ಬೆಯರ್ನ್ ಮ್ಯೂನಿಚ್ ತಂಡದ ಸವಾಲು ಎದುರಿಸಲಿದೆ. ‘‘ನಾವು ಬಯಸಿದ ಫಲಿತಾಂಶ ಪಡೆದಿದ್ದೇವೆ. ಪಂದ್ಯದ ತಯಾರಿಗಾಗಿ ಎರಡು ವಾರ ಶ್ರಮಿಸಿದ್ದೆವು. ನಿರ್ದಿಷ್ಟ ಕ್ಷಣಗಳಲ್ಲಿ ಅವರು ನಮಗೆ ಸವಾಲೊ ಡ್ಡಿದ್ದಾರೆ. ಆರಂಭದಲ್ಲಿ ನಾವು ಅಚ್ಚರಿ ಎದುರಿಸಿದರೂ, ಮೊದಲಿಗೆ ನಾವೇ ಗೋಲು ಗಳಿಸಿದ್ದೆವು. ಅವರು ಮೊದಲ ಗೋಲು ಗಳಿಸಿದ್ದರೆ ಅನಿಶ್ಚಿತತೆಗೆ ಕಾರಣ ವಾಗುತಿತ್ತು. ನಾವು ಗೋಲು ಗಳಿಸಲು ಶಕ್ತರಾದೆವು’’ ಎಂದು ಸುಯರೆಝ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News