ಹಾಕಿ ಆಟಗಾರ ಮನ್‌ದೀಪ್‌ ಸಿಂಗ್‌ಗೆ ಕೊರೋನ

Update: 2020-08-11 05:28 GMT

ಹೊಸದಿಲ್ಲಿ, ಆ.10: ಬೆಂಗಳೂರಿನಲ್ಲಿ ಆಗಸ್ಟ್ 20ರಿಂದ ಆರಂಭವಾಗಲಿರುವ ರಾಷ್ಟ್ರೀಯ ಶಿಬಿರಕ್ಕೆ ಮೊದಲು ಮನ್‌ದೀಪ್ ಸಿಂಗ್‌ಗೆ ಕೊರೋನ ವೈರಸ್ ಇರುವುದು ಖಚಿತವಾಗಿದೆ. ಸಿಂಗ್ ಕೊರೋನ ಸೋಂಕಿಗೆ ಒಳಗಾಗಿರುವ ಆರನೇ ಹಾಕಿ ಆಟಗಾರನಾಗಿದ್ದಾರೆ ಎಂದು ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್)ಸೋಮವಾರ ತಿಳಿಸಿದೆ.

ನಾಯಕ ಮನ್‌ಪ್ರೀತ್ ಸಿಂಗ್ ಸಹಿತ ಇತರ 5ಆಟಗಾರರೊಂದಿಗೆ ಮನ್‌ದೀಪ್‌ಗೆ ಚಿಕಿತ್ಸೆ ನೀಡಲಾಗುವುದು. 25ರ ಹರೆಯದ ಜಲಂಧರ್‌ನ ಫಾರ್ವರ್ಡ್ ಆಟಗಾರನಿಗೆ ಕೊರೋನದ ಯಾವುದೇ ಲಕ್ಷಣ ಕಂಡುಬಂದಿರಲಿಲ್ಲ.

ಹಾಕಿ ತಂಡದ ಆರು ಆಟಗಾರರಿಗೆ ಕೊರೋನ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಬಿರ ದಲ್ಲಿ ಆಟಗಾರರನ್ನು ಒಟ್ಟುಗೂಡಿಸಿರುವ ನಿರ್ಧಾರದ ಬಗ್ಗೆ ಪ್ರಶ್ನೆ ಎದ್ದಿದೆ. ಬೆಂಗಳೂರು ನಗರದಲ್ಲಿ ಕೊರೋನ ಪಾಸಿಟಿವ್ ಕೇಸ್‌ಗಳು ವಿಪರೀತವಾಗಿದೆ.

‘‘ರಾಷ್ಟ್ರೀಯ ಶಿಬಿರವನ್ನು ರದ್ದುಗೊಳಿಸಬೇಕಾಗಿತ್ತು. ಅದರ ಅಗತ್ಯ ಈಗ ಇಲ್ಲ. ಆಸ್ಟ್ರೇಲಿಯ ಹಾಗೂ ಇತರ ದೇಶಗಳಲ್ಲಿ ಟೂರ್ನಮೆಂಟ್‌ಗೆ 10-15ದಿನಗಳ ಮೊದಲು ಆಟಗಾರರನ್ನು ಒಂದೆಡೆ ಸೇರಿಸಲಾಗುತ್ತಿದೆ. ಮನೆಯಲ್ಲಿ ಹೇಗೆ ಫಿಟ್ ಇರಬಹುದು,ಎಷ್ಟು ದೂರ ಓಡಬೇಕು ಹಾಗೂ ಯಾವ ಕೌಶಲ್ಯವನ್ನು ಅಭ್ಯಾಸ ಮಾಡಬೇಕೆಂದು ಕೋಚ್‌ಗಳೇ ಸೂಚನೆ ನೀಡಬೇಕು’’ ಎಂದು ಭಾರತದ ಮಾಜಿ ನಾಯಕ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಝಾಫರ್ ಇಕ್ಬಾಲ್ ಹೇಳಿದ್ದಾರೆ.

ಮನ್‌ದೀಪ್ ಹಾಗೂ ಮನ್‌ಪ್ರೀತ್‌ರಲ್ಲದೆ, ಡಿಫೆಂಡರ್ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ಡ್ರಾಗ್-ಫ್ಲಿಕರ್ ವರುಣ್ ಕುಮಾರ್ ಹಾಗೂ ಗೋಲ್‌ಕೀಪರ್ ಕೃಷ್ಣ ಬಹದೂರ್ ಪಾಠಕ್ ಅವರಿಗೆ ಕಳೆದ ವಾರ ಸಾಯ್ ಕೇಂದ್ರದಿಂದ ವಾಪಸಾದ ಬಳಿಕ ಆಗಸ್ಟ್ 7 ರಂು ಕೊರೋನ ವೈರಸ್ ತಗಲಿತ್ತು.

 ‘‘ಭಾರತೀಯ ಪುರುಷರ ಹಾಕಿ ತಂಡದ ಸದಸ್ಯ ಮನ್‌ದೀಪ್ ಸಿಂಗ್ ಹಾಗೂ ಇತರ 20 ಆಟಗಾರರಿಗೆ ಬೆಂಗಳೂರಿನ ಸಾಯ್ ಕೇಂದ್ರದಲ್ಲಿರುವ ರಾಷ್ಟ್ರೀಯ ಶಿಬಿರದಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಯಾವುದೇ ಗುಣಲಕ್ಷಣ ಇಲ್ಲದ ಮನ್‌ದೀಪ್‌ಗೆ ಪಾಸಿಟಿವ್ ವರದಿ ಬಂದಿದೆ. ಸೋಂಕಿಗೆ ಒಳಗಾಗಿರುವ ಇತರ ಐವರು ಆಟಗಾರರೊಂದಿಗೆ ಮನ್‌ದೀಪ್‌ಗೆ ಕೂಡ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’’ ಎಂದು ಸಾಯ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಾಯ್ ವೈದ್ಯರ ಪ್ರಕಾರ, ಎಲ್ಲ ಆಟಗಾರರಿಗೆ ಕೊರೋನದ ಮೃದು ಲಕ್ಷಣಗಳಿದ್ದವು ಹಾಗೂ ಎಲ್ಲರೂ ಆರೋಗ್ಯವಾಗಿದ್ದಾರೆ.ಬೆಂಗಳೂರಿನ ನ್ಯಾಶನಲ್ ಸೆಂಟರ್‌ನಲ್ಲಿದ್ದಾರೆ. ಕೊರೋನ ವೈರಸ್ ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ಸಂದರ್ಭ ಆಟಗಾರರು ನ್ಯಾಶನಲ್ ಸೆಂಟರ್‌ನಲ್ಲಿ ಸಿಲುಕಿಕೊಂಡಿದ್ದರು.

ವಿರಾಮದ ಬಳಿಕ ಆಟಗಾರರಿಗೆ ಸೆಂಟರ್‌ನಲ್ಲಿ ತರಬೇತಿ ಆರಂಭಿಸುವ ಮೊದಲು ಕ್ವಾರಂಟೈನ್‌ನಲ್ಲಿ ಇರುವುನ್ನು ಕಡ್ಡಾಯಗೊಳಿಸಲಾಗಿದೆ. ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 22 ಲಕ್ಷದ ಗಡಿ ದಾಟಿದ್ದು, ಸಾವಿನ ಸಂಖ್ಯೆ 45,000 ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News