ಉನ್ನತ ವಿದ್ಯಾಭ್ಯಾಸಕ್ಕಾಗಿ ಮದರಾಸಿನಿಂದ ಅಮೆರಿಕಕ್ಕೆ ಹಾರಿದ್ದ ಕಮಲಾ ಹ್ಯಾರಿಸ್ ತಾಯಿ

Update: 2020-08-12 17:02 GMT
 ಕಮಲಾ ಹ್ಯಾರಿಸ್

ವಾಷಿಂಗ್ಟನ್, ಆ. 12: 1964 ಅಕ್ಟೋಬರ್ 20ರಂದು ಕ್ಯಾಲಿಫೋರ್ನಿಯದ ಓಕ್‌ಲ್ಯಾಂಡ್‌ ನಲ್ಲಿ ಜನಿಸಿರುವ ಕಮಲಾ ದೇವಿ ಹ್ಯಾರಿಸ್ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ರಾಜಕಾರಣಿ ಹಾಗೂ ವೃತ್ತಿಯಲ್ಲಿ ವಕೀಲೆ. ಅವರು 2017ರಿಂದ ಕ್ಯಾಲಿಫೋರ್ನಿಯವನ್ನು ಪ್ರತಿನಿಧಿಸುತ್ತಿರುವ ಸೆನೆಟರ್ ಆಗಿದ್ದಾರೆ.

ಹೊವಾರ್ಡ್ ವಿಶ್ವವಿದ್ಯಾನಿಲಯ ಮತ್ತು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಹೇಸ್ಟಿಂಗ್ಸ್ ಲಾ ಕಾಲೇಜ್‌ನಿಂದ ಪದವಿ ಪಡೆದಿರುವ ಅವರು ಸ್ಯಾನ್‌ ಫ್ರಾನ್ಸಿಸ್ಕೊದ ಜಿಲ್ಲಾ ಅಟಾರ್ನಿ ಕಚೇರಿ ಹಾಗೂ ಬಳಿಕ, ಸ್ಯಾನ್‌ ಫ್ರಾನ್ಸಿಸ್ಕೊ ಸಿಟಿ ಅಟಾರ್ನಿ ಕಚೇರಿಯಲ್ಲಿ ಕೆಲಸ ಮಾಡಿದ್ದರು.

2016 ನವೆಂಬರ್‌ನಲ್ಲಿ ಅವರು ಕ್ಯಾಲಿಫೋರ್ನಿಯದ ಮೂರನೇ ಮಹಿಳಾ ಸೆನೆಟರ್ ಆಗಿ ಆಯ್ಕೆಯಾದರು.

ಅವರ ತಾಯಿ ತಮಿಳುನಾಡಿನ ಶ್ಯಾಮಲಾ ಗೋಪಾಲನ್ ಸ್ತನ ಕ್ಯಾನ್ಸರ್ ವಿಜ್ಞಾನಿಯಾಗಿದ್ದರು. ಅವರು (ತಾಯಿ) 1960ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿ ಬರ್ಕ್‌ಲೇ ವಿಶ್ವವಿದ್ಯಾನಿಲಯದಲ್ಲಿ ಎಂಡೋಕ್ರಿನಾಲಜಿಯಲ್ಲಿ ಡಾಕ್ಟರೇಟ್ ಮಾಡಿದರು. ಕಮಲಾ ಹ್ಯಾರಿಸ್‌ರ ತಂದೆ ಡೊನಾಲ್ಡ್ ಹ್ಯಾರಿಸ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದಾರೆ. ಅವರು ಬರ್ಕ್‌ಲೇ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಅಧ್ಯಯನ ಮಾಡುವುದಕ್ಕಾಗಿ 1961ರಲ್ಲಿ ಜಮೈಕಾದಿಂದ ಅಮೆರಿಕಕ್ಕೆ ಹೋದರು.

ತಮಿಳು ಮತ್ತು ಆಫ್ರೊ-ಜಮೈಕನ್ ಜನಾಂಗೀಯರಾಗಿರುವ ಕಮಲಾ ಹ್ಯಾರಿಸ್ ತನ್ನನ್ನು ಸರಳವಾಗಿ ‘ಅಮೆರಿಕನ್’ ಎಂದಷ್ಟೇ ಗುರುತಿಸಿಕೊಳ್ಳುತ್ತಾರೆ.

ಕಮಲಾ ಮತ್ತು ಅವರ ತಂಗಿ ಮಾಯಾ ಹ್ಯಾರಿಸ್ ತಮ್ಮ ತಾಯಿಯ ಸಂಬಂಧಿಕರನ್ನು ನೋಡಲು ಒಮ್ಮೆ ಚೆನ್ನೈಗೆ ಬಂದಿದ್ದರು.

ಕಮಲಾ 2014ರಲ್ಲಿ ಯಹೂದಿ ಜನಾಂಗೀಯರಾದ ಡಗ್ಲಾಸ್ ಎಮ್‌ಹಾಫ್‌ರನ್ನು ವಿವಾಹವಾಗಿದ್ದಾರೆ. ಡಗ್ಲಾಸ್ ಎಮ್‌ಹಾಫ್‌ಗೆ ಈ ಹಿಂದೆ ಒಂದು ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.

ಭಾರತೀಯರಿಗೆ ಹೆಮ್ಮೆಯ ಕ್ಷಣ: ಭಾರತೀಯ-ಅಮೆರಿಕನ್ನರ ಸಂತಸ

ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ನೇಮಕಗೊಂಡಿರುವುದಕ್ಕೆ ಹಲವು ಭಾರತೀಯ-ಅಮೆರಿಕನ್ ಗುಂಪುಗಳು ಮತ್ತು ವ್ಯಕ್ತಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಹಾಗೂ ಅದು ‘ಶ್ರೇಷ್ಠ ಆಯ್ಕೆ’ ಮತ್ತು ‘ಹೆಮ್ಮೆಯ ಕ್ಷಣ’ ಎಂಬುದಾಗಿ ಅವರು ಬಣ್ಣಿಸಿದ್ದಾರೆ. ಅದೇ ವೇಳೆ, ಭಾರತ-ಅಮೆರಿಕ ಬಾಂಧವ್ಯಕ್ಕೆ ಕಮಲಾ ಹ್ಯಾರಿಸ್ ನೀಡಿರುವ ಕೊಡುಗೆಯನ್ನು ಕೆಲವು ಭಾರತೀಯ ಸಮುದಾಯದ ಸದಸ್ಯರು ಪ್ರಶ್ನಿಸಿದ್ದಾರೆ ಹಾಗೂ ಅಸ್ಮಿತೆ ರಾಜಕಾರಣ (ಐಡೆಂಟಿಟಿ ಪಾಲಿಟಿಕ್ಸ್)ದಿಂದ ತಾವು ಪ್ರಭಾವಿತರಾಗುವುದಿಲ್ಲ ಎಂದು ಹೇಳಿದ್ದಾರೆ.

‘‘ಇದು ನಮ್ಮ ದೇಶದ ಮಟ್ಟಿಗೆ ದೊಡ್ಡ ಆಯ್ಕೆಯಾಗಿದೆ’’ ಎಂದು ಪೆಪ್ಸಿಕೊ ಕಂಪೆನಿಯ ಮಾಜಿ ಮುಖ್ಯಸ್ಥೆ ಇಂದ್ರಾ ನೂಯಿ ಟ್ವೀಟ್ ಮಾಡಿದ್ದಾರೆ. ನೂಯಿಯನ್ನು ಜಗತ್ತಿನಾದ್ಯಂತ ಲಕ್ಷಾಂತರ ಮಹಿಳೆಯರು ತಮ್ಮ ಆದರ್ಶ ವ್ಯಕ್ತಿ ಎಂಬುದಾಗಿ ಪರಿಗಣಿಸಿದ್ದಾರೆ.

‘‘ಇದು ಭಾರತೀಯ-ಅಮೆರಿಕನ್ ಸಮುದಾಯಕ್ಕೆ ಅತ್ಯಂತ ರೋಮಾಂಚಕಾರಿ ಕ್ಷಣವಾಗಿದೆ! ಭಾರತೀಯ ಅಮೆರಿಕನ್ನರು ಈಗ ಅಮೆರಿಕದ ರಾಷ್ಟ್ರೀಯ ಚೌಕಟ್ಟಿನಲ್ಲಿ ನಿಜವಾಗಿಯೂ ಮುಖ್ಯವಾಹಿನಿಯ ಸಮುದಾಯವಾಗಿದೆ’’ ಎಂದು ‘ಇಂಡಿಯಾಸ್ಪೋರ’ ಸಂಘಟನೆಯ ಸ್ಥಾಪಕ ಎಂ.ಆರ್. ರಂಗಸ್ವಾಮಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಕಮಲಾ ಹ್ಯಾರಿಸ್‌ರ ಕತೆಯು ಬದಲಾಗುತ್ತಿರುವ ಹಾಗೂ ಸರ್ವರನ್ನೊಳಗೊಳ್ಳುವ ಅಮೆರಿಕದ ಕತೆಯಾಗಿದೆ.. ಅವರ ಅಭ್ಯರ್ಥಿತ್ವವು ಐತಿಹಾಸಿಕವಾಗಿದೆ ಹಾಗೂ ಇತರರಿಗೆ ಪ್ರೇರಣಾದಾಯಕವಾಗಿದೆ... ಕರಿಯ ಅಮೆರಿಕನ್ನರಿಗೆ ಮಾತ್ರವಲ್ಲ, ಲಕ್ಷಾಂತರ ಏಶ್ಯನ್ ಅಮೆರಿಕನ್ ಮತದಾರರಿಗೆ ಅವರು ಸ್ಫೂರ್ತಿಯಾಗಿದ್ದಾರೆ’’ ಎಂದು ಭಾರತೀಯ-ಅಮೆರಿಕನ್ ಗುಂಪು ‘ಇಂಪ್ಯಾಕ್ಟ್’ನ ಕಾರ್ಯಕಾರಿ ನಿರ್ದೇಶಕ ನೀಲ್ ಮಖಿಜ ಅಭಿಪ್ರಾಯಪಟ್ಟಿದ್ದಾರೆ. ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಪಕ್ಷವೊಂದರಿಂದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಥಮ ಆಫ್ರಿಕನ್ ಅಮೆರಿಕನ್ ಮತ್ತು ಪ್ರಥಮ ಏಶ್ಯನ್ ಅಮೆರಿಕನ್ ಆಗಿದ್ದಾರೆ.

ನಮ್ಮೊಂದಿಗೆ ಬಿಳಿಯ ಮಕ್ಕಳು ಆಡುತ್ತಿರಲಿಲ್ಲ

ಕಮಲಾ ಹ್ಯಾರಿಸ್‌ಗೆ ಏಳು ವರ್ಷವಾಗಿದ್ದಾಗ ಅವರ ಹೆತ್ತವರು ವಿವಾಹದಿಂದ ವಿಚ್ಚೇದನ ಪಡೆದುಕೊಂಡರು. ವಾರಾಂತ್ಯಗಳಲ್ಲಿ ನಾನು ಮತ್ತು ನನ್ನ ತಂಗಿ ಪಾಲೊ ಆಲ್ಟೊದಲ್ಲಿರುವ ನಮ್ಮ ತಂದೆಯನ್ನು ನೋಡಲು ಹೋಗುವಾಗ, ತಾವು ಕರಿಯರು ಎನ್ನುವ ಕಾರಣಕ್ಕಾಗಿ ನೆರೆಯ ಮನೆಗಳ ಮಕ್ಕಳನ್ನು ತಮ್ಮೊಂದಿಗೆ ಆಡಲು ಬಿಡುತ್ತಿರಲಿಲ್ಲ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News