ತಲೆ ಮೇಲೆ ಮರದ ಕೊಂಬೆ ಬಿದ್ದು 153 ದಿನವಾದರೂ ಗುಣಮುಖಳಾಗದ ಬಾಲಕಿ; ಪೋಷಕರು ಕಂಗಾಲು

Update: 2020-08-12 18:49 GMT

ಬೆಂಗಳೂರು, ಆ.11: ಶಾಲೆಗೆ ತೆರಳುತ್ತಿದ್ದ ಬಾಲಕಿಯ ಮೇಲೆ ಮರದ ಕೊಂಬೆ ಬಿದ್ದು 153 ದಿನವಾದರೂ ಇದುವರೆಗೂ ಬಾಲಕಿ ಚೇತರಿಸಿಕೊಳ್ಳದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ.

ರಾಮಮೂರ್ತಿನಗರದ ಕೌದೇನಹಳ್ಳಿ ಬಳಿ ಐದು ತಿಂಗಳ ಹಿಂದೆ ತಂದೆಯೊಂದಿಗೆ ಶಾಲೆಗೆ ತೆರಳುತ್ತಿದ್ದ, ರೇಚಲ್ ಪ್ರಿಯಾ ಎಂಬ ಬಾಲಕಿ ತಲೆಯ ಮೇಲೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಘಟನೆ ಸಂಭವಿಸಿ 153 ದಿನ ಕಳೆದರೂ ಬಾಲಕಿ ಆರೋಗ್ಯ ಮಾತ್ರ ಚೇತರಿಸಿಕೊಳ್ಳದೇ ಗಂಭೀರ ಸ್ಥಿತಿಯಲ್ಲಿಯೇ ಇದೆ.

ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ತಲೆಗೆ ಗಂಭೀರ ಪೆಟ್ಟು ಬಿದ್ದಿರುವುದರಿಂದ, ತಲೆಗೆ ಸರಿಯಾಗಿ ನೀರು ಸಪ್ಲೈ ಆಗುತ್ತಿಲ್ಲ ಎಂದು ವಿಪಿ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಈ ಸ್ಟಂಟ್‍ನಿಂದ ತಲೆಯಿಂದ ಎದೆ ಮೂಲಕ ಹೊಟ್ಟೆಗೆ ನೀರು ಸರಬರಾಜಾಗುತ್ತಿದೆ. ಬಾಲಕಿ ಆರೋಗ್ಯ ಸುಧಾರಣೆಗೆ ಮಣಿಪಾಲ್ ವೈದ್ಯರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

ಮಗಳ ಆರೋಗ್ಯ ಸ್ಥಿತಿ ನೋಡಿ ಚಿಂತೆಗೊಳಗಾಗಿರುವ ಪೋಷಕರು ಮುಂದಿನ ದಿನಗಳಲ್ಲಿ ಮಗಳಿಗೆ ಇದೆ ರೀತಿ ಆದರೆ ಹೇಗೆ? ವಿಪಿ ಸ್ಟಂಟ್ ಆಕೆಗೆ ಲೈಫ್ ಟೈಮ್ ಇರಬೇಕಾಗುತ್ತೆ ಅನ್ನುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಅವಳ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡಿದ್ದು, ಇದುವರೆಗೂ ನಮ್ಮನ್ನು ಗುರುತಿಸಿಲ್ಲ, ಮಾತು ಆಡುತ್ತಿಲ್ಲ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಒಂದೆಡೆ ಆಸ್ಪತ್ರೆಯಲ್ಲಿ ಮಗಳು ಜೀವಕ್ಕಾಗಿ ಹೋರಾಡುತ್ತಿದ್ದರೆ ಇನ್ನೊಂದೆಡೆ ಪೋಷಕರು ಕೊರೋನ ಸಂಕಷ್ಟ ನಡುವೆ ಜೀವನ ನಿರ್ವಹಣೆಗೆ ಹೋರಾಡುತ್ತಿದ್ದಾರೆ. ಈಗಾಗಲೇ ಆಸ್ಪತ್ರೆ ಬಿಲ್ 30 ಲಕ್ಷ ರೂ. ದಾಟಿದ್ದು, ಬಿಲ್ ಪಾವತಿ ಮಾಡುವುದಾಗಿ ಈ ಹಿಂದೆ ಬಿಬಿಎಂಪಿ ಆಶ್ವಾಸನೆ ನೀಡಿತ್ತು. ಆದರೆ ಮುಂದಿನ ದಿನಗಳಲ್ಲಿ ಇಷ್ಟು ವೆಚ್ಚ ಬಿಬಿಎಂಪಿ ಭರಿಸುತ್ತಾ ಅನ್ನುವ ಚಿಂತೆ ಪೋಷಕರಿಗೆ ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News