ಅಟ್ಲಾಂಟವನ್ನು ಮಣಿಸಿದ ಪಿಎಸ್‌ಜಿ ಸೆಮಿಫೈನಲ್‌ ಗೆ

Update: 2020-08-14 05:32 GMT

ಲಿಸ್ಬನ್: ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್‌ನಲ್ಲಿ ಬುಧವಾರ ಅಟ್ಲಾಂಟವನ್ನು 2-1 ಗೋಲುಗಳಿಂದ ಮಣಿಸಿದ ಪ್ಯಾರಿಸ್ ಸೈಂಟ್ ಜೆರ್ಮೈನ್(ಪಿಎಸ್‌ಜಿ) ತಂಡ ಸೆಮಿಫೈನಲ್ ತಲುಪಿದೆ.

ಬದಲಿ ಆಟಗಾರ ಎರಿಕ್ ಮ್ಯಾಕ್ಸಿಮ್ ಚೌಪೋ-ಮೋಟಿಂಗ್ ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿ ಪಿಎಸ್‌ಜಿಗೆ ಸೆಮಿಫೈನಲ್‌ನ್ನು ದೃಢಪಡಿಸಿದರು.

   ಚಾಂಪಿಯನ್ಸ್ ಲೀಗ್‌ನಲ್ಲಿ ಮೊದಲ ಅಭಿಯಾನ ಕೈಗೊಂಡಿದ್ದ ಅಟ್ಲಾಂಟ ಪರ 27ನೇ ನಿಮಿಷದಲ್ಲಿ ಮಾರಿಯೋ ಪಸಾಲಿಕ್ ಗೋಲು ದಾಖಲಿಸಿ ತಂಡಕ್ಕೆ 1-0 ಮುನ್ನಡೆಗೆ ನೆರವಾದರು. ಪ್ರಥಮಾರ್ಧ ಮತ್ತು ದ್ವಿತೀಯಾರ್ಧದಲ್ಲೂ 1-0 ಮುನ್ನಡೆ ಸಾಧಿಸುವತ್ತ ಹೆಜ್ಜೆ ಇರಿಸಿದ್ದ ಅಟ್ಲಾಂಟಕ್ಕೆ ಹೆಚ್ಚುವರಿ ಸಮಯದಲ್ಲಿ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.

 ಬ್ರೆಝಿಲ್‌ನ ಡಿಫೆಂಡರ್ ಮಾರ್ಕ್ವಿನ್ಹೋಸ್ 90ನೇ ನಿಮಿಷದಲ್ಲಿ ಗೋಲು ಕಬಳಿಸಿ 1-1 ಸಮಬಲ ಸಾಧಿಸುವುದರೊಂದಿಗೆ ಅಟ್ಲಾಂಟದ ಹಿಡಿತ ಸಡಿಲಗೊಂಡಿತು.

 1995ರ ಬಳಿಕ ಮೊದಲ ಬಾರಿಗೆ ಸೆಮಿಫೈನಲ್‌ಗೆ ತಲುಪಿಸಲು ಚೌಪೋ-ಮೋಟಿಂಗ್ ಪಿಎಸ್‌ಜಿಗೆ ನೆರವಾದರು. ಅವರು ಹೆಚ್ಚುವರಿ ಸಮಯದ ಮೂರನೇ ನಿಮಿಷದಲ್ಲಿ (90+3) ಚೆಂಡನ್ನು ಗುರಿಯತ್ತ ಕಳುಹಿಸಿದರು. ಇದರೊಂದಿಗೆ ಅಟ್ಲಾಂಟದ ಅಭಿಯಾನ ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News