ಪಾಕ್‌ನ ಫವಾದ್ ದಶಕದ ನಂತರ ಟೆಸ್ಟ್ ಕ್ರಿಕೆಟ್‌ಗೆ ಪುನರಾಗಮನ

Update: 2020-08-14 05:34 GMT

ಲಂಡನ್: ಪಾಕಿಸ್ತಾನದ ಅಗ್ರ ಸರದಿಯ ಬ್ಯಾಟ್ಸ್‌ಮನ್ ಫವಾದ್ ಆಲಂ ದಶಕದ (ಹತ್ತು ವರ್ಷ 259 ದಿನ)ಬಳಿಕ ಟೆಸ್ಟ್ ಕ್ರಿಕೆಟ್ ತಂಡಕ್ಕೆ ವಾಪಸಾಗಿದ್ದಾರೆ.

  ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ಪಾಕಿಸ್ತಾನದ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುವ ಮೂಲಕ ಫವಾದ್ ತಂಡಕ್ಕೆ ಮರಳಿದ್ದಾರೆ. ಈಗ ಅವರ ವಯಸ್ಸು 34 ವರ್ಷ ಮತ್ತು 310 ದಿನಗಳು. ತಡವಾಗಿ ಆಲಂಗೆ ಅವಕಾಶ ಸಿಕ್ಕಿದ್ದರೂ ಅವರಿಗೆ ಈ ಅವಕಾಶವನ್ನು ಸದುಪಯೋಗಪಡಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ತಾನೆದುರಿಸಿದ ನಾಲ್ಕನೇ ಎಸೆತದಲ್ಲಿ ಔಟಾದರು. ಅವರನ್ನು ವೋಕ್ಸ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಇದರೊಂದಿಗೆ ಫವಾದ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಫವಾದ್ ಜುಲೈ, 2009ರಲ್ಲಿ ಪಾಕಿಸ್ತಾನದ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ತಾನಾಡಿದ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದರು. ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ ಪಾಕಿಸ್ತಾನದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

 2009ರಲ್ಲಿ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದ ನಂತರ ಅವರ ಟೆಸ್ಟ್ ವೃತ್ತಿಜೀವನ ಸ್ಥಗಿತಗೊಂಡಿತ್ತು. 2009, ನ.24ರಿಂದ 28ರ ತನಕ ಡುನೇೆಡ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಡಿರುವುದು ಅವರ ಕೊನೆಯ ಟೆಸ್ಟ್ ಆಗಿತ್ತು. ಈ ಪಂದ್ಯದಲ್ಲಿ ಅವರು ಮೊದಲ ಇನಿಂಗ್ಸ್‌ನಲ್ಲಿ 29ರನ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 5 ರನ್ ಗಳಿಸಿದ್ದರು. ಪಾಕಿಸ್ತಾನ ಈ ಪಂದ್ಯದಲ್ಲಿ 32 ರನ್‌ಗಳ ಸೋಲು ಅನುಭವಿಸಿತ್ತು. ಫವಾದ್ 3 ಟೆಸ್ಟ್ ಗಳಲ್ಲಿ 250 ರನ್ ಗಳಿಸಿದ್ದರು. ಗರಿಷ್ಠ ವೈಯಕ್ತಿಕ ಸ್ಕೋರ್ 168 ಆಗಿದೆ. ಅವರು 2015-16ರವರೆಗೆ ಏಕದಿನ ಮತ್ತು ಟ್ವೆಂಟಿ-20 ಪಂದ್ಯಗಳಲ್ಲಿ ಭಾಗವಹಿಸಿದ್ದರೂ ಕೂಡ, ಟೆಸ್ಟ್ ನಲ್ಲಿ ಅವಕಾಶ ಮತ್ತೆ ಸಿಗಲು ದಶಕಗಳ ಕಾಲ ಕಾಯಬೇಕಾಯಿತು.

 ಪಾಕಿಸ್ತಾನದ ಖ್ಯಾತ ಪ್ರಥಮ ದರ್ಜೆ ಕ್ರಿಕೆಟಿಗ ತಾರಿಕ್ ಆಲಂ ಪುತ್ರ ಫವಾದ್ ತನ್ನ 17ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಪಾಕ್‌ನ ಅಂಡರ್-19 ವಿಶ್ವಕಪ್ ತಂಡದ ಪರ ಆಡಿದ್ದರು. ಭರವಸೆಯ ಪ್ರತಿಭೆಗಳಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟ ಆಲಂ ದೇಶೀಯ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. 166 ಪ್ರಥಮ ದರ್ಜೆ ಪಂದ್ಯಗಳಲ್ಲಿ 12,265 ರನ್ , 34 ಶತಕ ಮತ್ತು 60 ಅರ್ಧಶತಕಗಳನ್ನು ಗಳಿಸಿದ ಫವಾದ್ ಔಟಾಗದೆ 296 ರನ್ ಗಳಿಸಿರುವುದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 38 ಏಕದಿನ ಪಂದ್ಯಗಳಲ್ಲಿ 1 ಶತಕ ಮತ್ತು 6 ಅರ್ಧಶತಕಗಳನ್ನು ಒಳಗೊಂಡ 966 ರನ್ ಗಳಿಸಿದ್ದಾರೆ. ಆದಾಗ್ಯೂ ಪಾಕಿಸ್ತಾನದ ಪರ ಟೆಸ್ಟ್ ತಂಡದಲ್ಲಿ ಮತ್ತೆ ಆಡಲು ಹನ್ನೊಂದು ವರ್ಷಗಳ ಕಾಲ ಕಾಯಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News