8 ಗೋಲು ಚಚ್ಚಿ ಮೆಸ್ಸಿ ಪಡೆಗೆ ಹೀನಾಯ ಸೋಲುಣಿಸಿದ ಬಯೆರ್ನ್ ಮ್ಯೂನಿಚ್

Update: 2020-08-15 05:53 GMT

ಲಿಸ್ಬಾನ್, ಆ.15: ಫುಟ್ಬಾಲ್ ಜಗತ್ತಿನ ಅಚ್ಚರಿಯ ಘಟನೆಗೆ ಶುಕ್ರವಾರ ಚಾಂಪಿಯನ್ಸ್ ಲೀಗ್ ಟೂರ್ನಿಯ ಕ್ವಾರ್ಟರ್ ಫೈನಲ್ ಸಾಕ್ಷಿಯಾಯಿತು. ಫುಟ್ಬಾಲ್ ಮಾಂತ್ರಿಕ ಲಿಯನೋಲ್ ಮೆಸ್ಸಿ ನೇತೃತ್ವದ ಪ್ರಬಲ ಬಾರ್ಸಿಲೋನಾ ತಂಡದ ವಿರುದ್ಧ 8-2 ಗೋಲುಗಳ ಜಯ ದಾಖಲಿಸುವ ಮೂಲಕ ಬಯೆರ್ನ್ ಮ್ಯೂನಿಚ್ ತಂಡ ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದೆ.

ಇವಾನ್ ಪೆರಿಸಿಕ್ ಮತ್ತು ಸರ್ಜ್ ಗ್ಯಾಬ್ರಿಯವರ ಪಾಸ್‌ಗಳನ್ನು ಗೋಲುಗಳಾಗಿ ಪರಿವರ್ತಿಸುವ ಮೂಲಕ ಥಾಮಸ್ ಮ್ಯುಲ್ಲೆರ್ ಮೊದಲ 31ನೇ ನಿಮಿಷದಲ್ಲೇ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಆದರೆ ಪ್ರತಿಹೋರಾಟ ನಡೆಸಿದ ಬಾರ್ಸಿಲೋನಾ ಅಲ್ಪಕಾಲ ಸಮಬಲ ಸಾಧಿಸಿತು.

ಲೂಯಿಸ್ ಸ್ಯೂರೆಝ್ ಉತ್ತರಾರ್ಧದಲ್ಲಿ ಮ್ಯೂನಿಚ್ ಮುನ್ನಡೆಯನ್ನು 4-2ಕ್ಕೇರಿಸಿದರು. ಜೋಶುವಾ ಕಿಮ್ಮಿಚ್ ಅವರು ಐದನೇ ಗೋಲು ಸಾಧಿಸಿದರೆ, ಅಂತಿಮ ಹಂತದಲ್ಲಿ ಮತ್ತೆ ಮೂರು ಗೋಲುಗಳು ಬಂದವು. ರಾಬರ್ಟ್ ಲೆವಾಂಡ್‌ಸ್ಕೊವಿಸ್ಕಿ ಒಂದು ಹಾಗೂ ಬದಲಿ ಆಟಗಾರ ಫಿಲಿಪ್ ಕುಟಿನೊ ಎರಡು ಗೋಲು ಬಾರಿಸಿದರು.

2014ರ ವಿಶ್ವಕಪ್‌ನಲ್ಲಿ ಜರ್ಮನಿ 7-1 ಅಂತರದಿಂದ ಬ್ರೆಝಿಲ್ ತಂಡವನ್ನು ಮಣಿಸಿದ ಪಂದ್ಯವನ್ನು ಈ ಪಂದ್ಯ ನೆನಪಿಸಿತು. ಮ್ಯುಲ್ಲೆರ್ ಆ ಪಂದ್ಯದಲ್ಲೂ ಆಡಿ ಗೋಲು ಬಾರಿಸಿದ್ದರು. ಜರ್ಮನಿ 2014ರ ವಿಶ್ವಕಪ್ ಗೆದ್ದರೆ, ಬಯೆರ್ನ್ ಕೂಡಾ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಸೆಮಿಫೈನಲ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ಅಥವಾ ಲಿಯೋನ್ ಸವಾಲನ್ನು ಬಯೆರ್ನ್ ಎದುರಿಸಬೇಕಾಗುತ್ತದೆ.

ಇದು ಬಯೆರ್ನ್ ತಂಡದ 19ನೇ ಸತತ ಜಯವಾಗಿದ್ದು, ಈ ಸೀಸನ್‌ನ ಒಂಬತ್ತು ಪಂದ್ಯಗಳಲ್ಲಿ ಈ ತಂಡ 39 ಗೋಲು ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News