ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್‌ಗೆ ಪ್ರಧಾನಿ ಮೋದಿ ಚಾಲನೆ

Update: 2020-08-15 06:18 GMT

ಹೊಸದಿಲ್ಲಿ, ಆ.15: ಭಾರತದ 74ನೇ ಸ್ವಾತಂತ್ರೋತ್ಸವ ದಿನಾಚರಣೆಯ ಸಂದರ್ಭದಲ್ಲಿ ದಿಲ್ಲಿಯ ಪ್ರತಿಷ್ಠಿತ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಅನ್ನು ಪ್ರಾರಂಭಿಸಿದರು.

"ಸಂಪೂರ್ಣ ತಂತ್ರಜ್ಞಾನ ಆಧರಿತ'' ಉಪಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ಹೇಳಿದ ಪ್ರಧಾನಿ, ಪ್ರತಿಯೊಬ್ಬ ಭಾರತೀಯನು ಆತ/ ಆಕೆಯ ವೈದ್ಯಕೀಯ ಪರಿಸ್ಥಿತಿಗಳ ಬಗ್ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಳಗೊಂಡಿರುವ ಗುರುತಿನ ಚೀಟಿಯನ್ನು ಪಡೆಯುತ್ತಾನೆ ಎಂದು ವಿವರಿಸಿದರು.

"ಈ ಕಾರ್ಡನ್ನು ಆರೋಗ್ಯ ಸೇವೆಗಳು ಹಾಗೂ ಔಷಧಿಗಳ ಪಡೆಯುವ ವೇಳೆ ಬಳಸಬಹುದು. ಇಂದಿನಿಂದ ದೇಶದಲ್ಲಿ ಹೊಸ ಅಭಿಯಾನ ಆರಂಭವಾಗಲಿದೆ.ಇದು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲಿದೆ'' ಎಂದು ಪ್ರಧಾನಿ ಹೇಳಿದರು.

"ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಗುರುತಿನ ಚೀಟಿ ಸಿಗುತ್ತದೆ. ನೀವು ವೈದ್ಯರನ್ನು ಅಥವಾ ಔಷಧಾಲಯಗಳನ್ನು ಭೇಟಿ ಮಾಡಿದಾಗಲೆಲ್ಲಾ ಈ ಕಾರ್ಡ್‌ನಲ್ಲಿ ಎಲ್ಲವೂ ಲಾಗ್‌ಇನ್ ಆಗುತ್ತದೆ. ವೈದ್ಯರ ನೇಮಕಾತಿಯಿಂದ ಹಿಡಿದು ಔಷಧಿಗಳವರೆಗೆ ಎಲ್ಲವೂ ನಿಮ್ಮ ಆರೋಗ್ಯ ಪ್ರೊಫೈಲ್‌ನಲ್ಲಿ ಲಭ್ಯವಿರುತ್ತದೆ'' ಎಂದರು.

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಎಬಿ ಪಿಎಂ ಜಯ್)ಅಡಿಯಲ್ಲಿ ಬರುವ ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ದೇಶದಲ್ಲಿ ಆರೋಗ್ಯ ಸೇವೆಗಳ ದಕ್ಷತೆ, ಪರಿಣಾಮಕಾರಿತ್ವ ಮತ್ತು ಪಾರದರ್ಶಕತೆಯನ್ನು ಸುಧಾರಿಸುವ ನಿರೀಕ್ಷೆಯಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News