ರೋಹಿತ್, ವಿನೇಶ್ ಸಹಿತ ನಾಲ್ವರು ಖೇಲ್‌ರತ್ನಕ್ಕೆ ಶಿಫಾರಸು

Update: 2020-08-18 09:46 GMT

ಹೊಸದಿಲ್ಲಿ,ಆ.18: ಭಾರತದ ಸೀಮಿತ ಓವರ್ ಕ್ರಿಕೆಟ್‌ನ ಉಪ ನಾಯಕ ರೋಹಿತ್ ಶರ್ಮಾ, ಸ್ಟಾರ್ ‌ಕುಸ್ತಿಪಟು ವಿನೇಶ್ ಫೋಗಾಟ್, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಅವರನ್ನು ಈ ವರ್ಷದ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿಯು ಮಂಗಳವಾರ ಶಿಫಾರಸು ಮಾಡಿದೆ.

2016ರ ಬಳಿಕ ಎರಡನೇ ಬಾರಿ ನಾಲ್ವರು ಕ್ರೀಡಾಪಟುಗಳನ್ನು ದೇಶದ ಅತ್ಯುನ್ನತ ಕ್ರೀಡಾಗೌರವ ಖೇಲ್‌ರತ್ನ ಪ್ರಶಸ್ತಿಯ ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದೆ.

ವೀರೇಂದ್ರ ಸೆಹ್ವಾಗ್ ಹಾಗೂ ಮಾಜಿ ಹಾಕಿ ನಾಯಕ ಸರ್ದಾರ್ ಸಿಂಗ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಕ್ರೀಡಾ ಪ್ರಾಧಿಕಾರ(ಸಾಯ್)ಕೇಂದ್ರ ಕಚೇರಿಯಲ್ಲಿ ಸಭೆ ಸೇರಿ ಶಿಫಾರಸು ಮಾಡಿತು.

ರೋಹಿತ್‌ರನ್ನು ಬ್ಯಾಟಿಂಗ್‌ನಲ್ಲಿ ತೋರಿರುವ ಸಾಧನೆಗೆ, ವಿನೇಶ್‌ರನ್ನು 2018ರ ಕಾಮನ್‌ವೆಲ್ತ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿರುವುದಕ್ಕೆ, ತಮಿಳುನಾಡಿನ ತಂಗವೇಲು ಅವರನ್ನು 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದಕ್ಕೆ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

2016ರಲ್ಲಿ ಶಟ್ಲರ್ ಪಿ.ವಿ.ಸಿಂಧು, ಜಿಮ್ನಾಸ್ಟ್ ದೀಪಾ ಮಲಿಕ್,ಶೂಟರ್ ಜಿತು ರಾಯ್ ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್‌ಗೆ ಜಂಟಿಯಾಗಿ ಖೇಲ್‌ರತ್ನ ಪ್ರಶಸ್ತಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News