ಯುಎಇ: ಅನಿವಾಸಿಗಳ ವೀಸಾ ನವೀಕರಣ ಅವಧಿ 3 ತಿಂಗಳು ವಿಸ್ತರಣೆ

Update: 2020-08-18 14:02 GMT

ದುಬೈ (ಯುಎಇ), ಆ. 18: ಯುಎಇಯ ನಿವಾಸಿಗಳು ಮತ್ತು ಸಂದರ್ಶಕರ ಅವಧಿ ಮುಗಿದಿರುವ ವೀಸಾಗಳನ್ನು ನವೀಕರಿಸುವ ಅವಧಿಯನ್ನು ಯುಎಇ ಸರಕಾರವು ಇನ್ನೂ ಮೂರು ತಿಂಗಳು ವಿಸ್ತರಿಸಿದೆ.

ಮಾರ್ಚ್ 1ರ ಮೊದಲೇ ಅವಧಿ ಮುಗಿದಿರುವ ವೀಸಾಗಳನ್ನು ಹೊಂದಿದವರಿಗೆ ನೀಡಲಾಗಿರುವ ಕಿರು ಅವಧಿಯ ಕ್ಷಮಾದಾನದ ವಿಸ್ತರಣೆಯನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಕ್ಷಮಾದಾನ ಯೋಜನೆಯು ಮೇ 18ರಂದು ಆರಂಭವಾಗಿದ್ದು ಆಗಸ್ಟ್ 18ರಂದು ಕೊನೆಗೊಳ್ಳಬೇಕಾಗಿತ್ತು. ಈಗ ಅದನ್ನು ನವೆಂಬರ್ 17ರವರೆಗೆ ವಿಸ್ತರಿಸಲಾಗುವುದು ಎಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಆ್ಯಂಡ್ ಸಿಟಿಝನ್‌ಶಿಪ್ (ಐಸಿಎ)ನ ಮಹಾನಿರ್ದೇಶಕ ಮೇಜರ್ ಜನರಲ್ ಸಯೀದ್ ರಕನ್ ಅಲ್ ರಶೀದಿ ಹೇಳಿದರು.

ಯುಎಇ ಸರಕಾರದ ಈ ನಿರ್ಧಾರವನ್ನು ಹಲವಾರು ಮಂದಿ ಸ್ವಾಗತಿಸಿದ್ದಾರೆ. ‘‘ಸರಿಯಾದ ದಾಖಲೆಪತ್ರಗಳು ಮತ್ತು ಪಾಸ್‌ಪೋರ್ಟ್‌ಗಳು ಇಲ್ಲದ ಹಲವಾರು ಜನರಿಗೆ ‘ಔಟ್ ಪಾಸ್’ಗಳನ್ನು ನೀಡಲಾಗಿದೆ. ಈ ಮೊದಲು ಸರಕಾರ ಒಂದು ತಿಂಗಳ ವಿಸ್ತರಣೆಯನ್ನು ನೀಡಿತ್ತು. ಈಗ ಅದನ್ನು ಮೂರು ತಿಂಗಳಿಗೆ ವಿಸ್ತರಿಸಲಾಗಿದೆ. ಸೂಕ್ತ ದಾಖಲೆಗಳಿಲ್ಲದೆ ಹೆದರಿದ್ದ ಜನರು ಈಗ ನಿರಾಳರಾಗಿದ್ದಾರೆ’’ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ವಿ. ರೆಡ್ಡಿ ಹೇಳಿದರು.

ಹಲವಾರು ವರ್ಷಗಳಿಂದ ಊರಿಗೆ ಹೋಗಲು ಸಾಧ್ಯವಾಗದ ಜನರಿಗೆ ಇದು ವರದಾನವಾಗಿ ಬಂದಿದೆ ಎಂದು ಹೇಳಿದ ಅವರು, ಅಂಥವರು, ಈ ಅವಕಾಶವನ್ನು ಬಳಸಿಕೊಂಡು ಕೊನೆಗೂ ತಮ್ಮ ಕುಟುಂಬಗಳನ್ನು ಸೇರಿಕೊಳ್ಳಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News