ಪೊಲೀಸ್-ಗುಪ್ತಚರ ಇಲಾಖೆ ವೈಫಲ್ಯದ ಕುರಿತು ಮಾಧ್ಯಮಗಳು ಪ್ರಶ್ನಿಸಲಿ: ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ

Update: 2020-08-18 15:11 GMT

ಬೆಂಗಳೂರು, ಆ.18: ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಕೇವಲ ಒಂದೇ ದಿಕ್ಕಿನಲ್ಲಿ ಆಲೋಚನೆ ಮಾಡದೆ, ಪೊಲೀಸರು, ಗುಪ್ತಚರ ಇಲಾಖೆಯ ವೈಫಲ್ಯವನ್ನು ಪ್ರಶ್ನಿಸಿದಾಗ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಜಮೀಯತುಲ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ತಿಳಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದಲ್ಲಿನ ಬಿಫ್ಟ್ ಸಭಾಂಗಣದಲ್ಲಿ ಮುಸ್ಲಿಮ್ ಮುತ್ತಹಿದ ಮಹಝ್ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಡಿ.ಜೆ.ಹಳ್ಳಿಯಲ್ಲಿ ಅಂದು ಗೋಲಿಬಾರ್ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತೆ? ಗೋಲಿಬಾರ್ ನಡೆಸುವ ಮುನ್ನ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೆ? ಎಂಬುದನ್ನು ಮಾಧ್ಯಮಗಳು ಪ್ರಶ್ನಿಸಬೇಕು. ಇವತ್ತು ಮಾಧ್ಯಮಗಳು ನಿಷ್ಪಕ್ಷಪಾತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸದಿದ್ದರೆ, ದೇಶದಲ್ಲಿ ಶಾಂತಿ ಕಾಪಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಆದರೆ, ಸರಕಾರ ಈವರೆಗೆ ಅವರ ಕುಟುಂಬದವರಿಗೆ ಯಾವುದೇ ಪರಿಹಾರ ಘೋಷಿಸಿಲ್ಲ. ಸರಕಾರ ಈ ವಿಚಾರದಲ್ಲಿ ಯಾಕೆ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಒಟ್ಟಾರೆಯಾಗಿ ಈ ಇಡೀ ಘಟನೆಯನ್ನು ಸರಕಾರ ಮಾನವೀಯ ನೆಲೆಯಲ್ಲಿ ನೋಡಿ, ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ಘೋಷಿಸಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ನಮ್ಮ ರಾಜ್ಯ ಹಾಗೂ ಬೆಂಗಳೂರಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಮುಸ್ಲಿಮ್ ಮುತ್ತಹಿದ ಮಹಝ್ ಸಂಚಾಲಕ ಮಸೂದ್ ಅಬ್ದುಲ್ ಖಾದರ್ ಮಾತನಾಡಿ, ಡಿ.ಜೆ.ಹಳ್ಳಿಯಲ್ಲಿ ನಡೆದ ಘಟನೆ ಎಲ್ಲರಿಗೂ ಬೇಸರ ತಂದಿದೆ. ಪೊಲೀಸರಿಗೆ ದೂರು ನೀಡಲು ಮುಂದಾದಾಗ, ಅವರು ತಕ್ಷಣ ಕ್ರಮ ಕೈಗೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಗಾಡಿಗಳಿಗೆ ಬೆಂಕಿ ಹಚ್ಚಿದ್ದು, ಶಾಸಕರ ಮನೆಗೆ ಬೆಂಕಿ ಹಚ್ಚಿದ್ದು ಇವೆಲ್ಲ ಘಟನೆಗಳು ಆಗಬಾರದಿತ್ತು ಎಂದರು.

ಪೊಲೀಸ್ ಗೋಲಿಬಾರ್ ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚೆ ಮಾಡಿದ್ದೇವೆ. ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ಜರುಗಿರುವ ಬಗ್ಗೆ ಅವರಿಗೆ ತಿಳಿಸಿದ್ದೇವೆ. ಇದೀಗ, ಪೊಲೀಸರು ಅಮಾಯಕರನ್ನು ಬಂಧಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ ಎಂದು ಅವರು ಹೇಳಿದರು.

ಈಗಾಗಲೆ 300ಕ್ಕೂ ಹೆಚ್ಚು ಜನರನ್ನು ಬಂಧಿಸಿರುವ ಮಾಹಿತಿ ಇದೆ. ಆ ಪ್ರದೇಶದಲ್ಲಿ ಅಂದಿನಿಂದಲೆ ಕರ್ಫ್ಯೂ ಇದೆ. ಜನ ಹೊರಗಡೆ ಬರಲು ಆಗುತ್ತಿಲ್ಲ. ಭಯದ ವಾತಾವರಣ ನಿರ್ಮಾಣವಾಗಿದೆ. ಈ ವಿಚಾರದ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲು ಪತ್ರ ಬರೆದು ಭೇಟಿಗೆ ಅನುಮತಿ ಕೋರಿದ್ದೇವೆ ಎಂದು ಅವರು ಹೇಳಿದರು.

ಮೃತಪಟ್ಟವರ ಪೈಕಿ ಯಾಸೀನ್ ಖುರೇಷಿ ಮಾಂಸ ರಫ್ತು ಮಾಡಲು ಹೋಗುತ್ತಿದ್ದಾಗ ಅವರಿಗೆ ಗುಂಡುತಾಗಿದೆ. ಅಬ್ದುಲ್ ವಾಜೀದ್ ಕೆಲಸದಿಂದ ಹಿಂದಿರುಗುತ್ತಿದ್ದಾಗ ಗುಂಡೇಟಿಗೆ ಬಲಿಯಾಗಿದ್ದಾರೆ. ಅದೇ ರೀತಿ ಆಟೋ ಚಾಲಕ ಸಿದ್ದೀಕ್ ಮೃತಪಟ್ಟಿದ್ದಾರೆ. ನದೀಮ್ ಎಂಬ ಯುವಕನಿಗೆ ಗುಂಡು ತಗಲಿದೆ ಎಂದು ಖಾದರ್ ತಿಳಿಸಿದರು.

ನದೀಮ್ ನನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಅವರ ಕುಟುಂಬದವರು ಔಷಧಿ ತರಲು ಹೋಗಿದ್ದ ವೇಳೆ ನದೀಮ್‍ನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಮೂರು ದಿನಗಳ ನಂತರ ಬೌರಿಂಗ್ ಆಸ್ಪತ್ರೆಯಿಂದ ಅವರ ಕರೆ ಮಾಡಿ ಕರೆಸಿಕೊಂಡು ನದೀಮ್‍ಗೆ ಕೊರೋನ ಸೋಂಕು ತಗುಲಿದ್ದು, ಮೃತಪಟ್ಟಿರುವುದಾಗಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮೃತಪಟ್ಟಿರುವ ನಾಲ್ವರು ಯುವಕರು ಅವರ ಕುಟುಂಬಗಳಿಗೆ ಆಧಾರಸ್ತಂಭವಾಗಿದ್ದರು ಎಂದು ಅವರು ಹೇಳಿದರು.

ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಡಿ.ಜೆ.ಹಳ್ಳಿ ಪ್ರದೇಶದಲ್ಲಿ ಹಾಕಿರುವ ಕರ್ಫ್ಯೂ ಹಿಂಪಡೆಯಬೇಕು, ಅಮಾಯಕರ ಬಂಧನವನ್ನು ನಿಲ್ಲಿಸಬೇಕು ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶಾಂತಿ ಸಮಿತಿಗಳನ್ನು ರಚಿಸಿ, ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಖಾದರ್ ಹೇಳಿದರು.

ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ಮಾತನಾಡಿ, ರಾತ್ರಿಹೊತ್ತು ಮನೆಗಳಿಗೆ ಹೋಗಿ ಯುವಕರನ್ನು ಬಂಧಿಸಲಾಗುತ್ತಿದೆ. ಇದರಿಂದಾಗಿ, ಆ ಪ್ರದೇಶದಲ್ಲಿ ಭಯದ ವಾತಾವರಣ ನಿಮಾರ್ಣವಾಗಿದೆ. ಅಮಾಯಕರ ಬಂಧನಗಳನ್ನು ನಿಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ. ತಪ್ಪಿತಸ್ಥರು ಯಾರೇ ಆಗಿರಲಿ ಕ್ರಮ ಕೈಗೊಳ್ಳಲಿ. ಜೊತೆಗೆ, ಈ ಘಟನೆಗೆ ಕಾರಣವಾದ ವ್ಯಕ್ತಿಯ ವಿರುದ್ಧವು ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೌಲಾನ ಏಜಾಝ್ ಅಹ್ಮದ್ ನದ್ವಿ, ಮೌಲಾನ ಝೈನುಲ್ ಆಬಿದೀನ್, ನ್ಯಾಯವಾದಿ ಅಕ್ಮಲ್ ರಝ್ವಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News