ಕ್ಷಿಪ್ರಕ್ರಾಂತಿ: ಮಾಲಿ ಅಧ್ಯಕ್ಷ, ಪ್ರಧಾನಿ ಸೆರೆ, ರಾಜೀನಾಮೆ

Update: 2020-08-19 04:26 GMT

ಬಮಾಕೊ (ಮಾಲಿ), ಆ.19: ಮಾಲಿಯಲ್ಲಿ ಬುಧವಾರ ಕ್ಷಿಪ್ರ ಕ್ರಾಂತಿ ನಡೆದು ಬಂಡುಕೋರ ಪಡೆಗಳು ಅಧ್ಯಕ್ಷರನ್ನು ಸೆರೆ ಹಿಡಿದಿವೆ. ಇದರ ಬೆನ್ನಲ್ಲೇ ದೇಶದಲ್ಲಿ ರಕ್ತಪಾತ ತಪ್ಪಿಸುವ ಸಲುವಾಗಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಇಬ್ರಾಹೀಂ ಬೌಬಕ್ಕರ್ ಕೀತಾ ಪ್ರಕಟಿಸಿದ್ದಾರೆ.

 ಬಂಡುಕೋರ ಸೈನಿಕರು ಅಧ್ಯಕ್ಷ ಕೀತಾ ಹಾಗೂ ಪ್ರಧಾನಿ ಬೌಬೌ ಸಿಸ್ಸೆ ಅವರನ್ನು ಮಂಗಳವಾರ ಮಧ್ಯಾಹ್ನ ಸೆರೆ ಹಿಡಿದಿದ್ದರು. ಈ ಮೂಲಕ ಪಶ್ಚಿಮ ಆಫ್ರಿಕಾ ದೇಶದಲ್ಲಿ ಒಂದು ತಿಂಗಳ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದೆ. ಬಂಡುಕೋರ ಸೈನಿಕರು ಸೆರೆ ಹಿಡಿದ ಇಬ್ಬರು ಮುಖಂಡರನ್ನು ರಾಜಧಾನಿ ಬಮಾಕೋ ಬಳಿಯ ಕಾತಿ ನಗರದಲ್ಲಿರುವ ಸೇನಾ ನೆಲೆಗೆ ಒಯ್ಯಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಬಂಡುಕೋರರು ಸೇನಾ ನೆಲೆಯನ್ನು ಮಂಗಳವಾರ ವಶಪಡಿಸಿಕೊಂಡಿದ್ದರು.

ಅಧ್ಯಕ್ಷರ ಬಂಧನವನ್ನು ಸಂಭ್ರಮಿಸಿದ ಜನರು ನಗರದ ಕೇಂದ್ರಭಾಗದಲ್ಲಿ ಜಮಾಯಿಸಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದರು. ಇದಕ್ಕೂ ಮುನ್ನ ಬಂಡುಕೋರ ಸೈನಿಕರು 75 ವರ್ಷ ವಯಸ್ಸಿನ ಕೀತಾ ಅವರನ್ನು ಅಧಿಕೃತ ಬಂಗಲೆಯಿಂದ ಬಂಧಿಸಿದ್ದರು.

ಸಮಾಧಾನಚಿತ್ತದಿಂದ ಇದ್ದಂತೆ ಕಂಡುಬಂದ ಕೀತಾ ಮಂಗಳವಾರ ಮಧ್ಯರಾತ್ರಿ ಸರ್ಕಾರಿ ಟೆಲಿವಿಷನ್ ಮುಂದೆ ಹಾಜರಾಗಿ ಸರ್ಕಾರ ಹಾಗೂ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸಿರುವುದನ್ನು ಪ್ರಕಟಿಸಿದರು. ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡದೇ ಅನ್ಯ ಮಾರ್ಗವಿಲ್ಲ ಎಂದು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News