ಎಸ್‍ಡಿಪಿಐ ನಿಷೇಧದ ಬಗ್ಗೆ ಯಾವುದೇ ನಿರ್ದಿಷ್ಟ ತೀರ್ಮಾನ ಕೈಗೊಂಡಿಲ್ಲ: ಸಚಿವ ಮಾಧುಸ್ವಾಮಿ ಸ್ಪಷ್ಟನೆ

Update: 2020-08-20 13:41 GMT

ಬೆಂಗಳೂರು, ಆ. 20: `ದೇವರಜೀವನಹಳ್ಳಿ(ಡಿ.ಜೆ.ಹಳ್ಳಿ) ಮತ್ತು ಕಾಡುಗೊಂಡನಹಳ್ಳಿ(ಕೆ.ಜಿ.ಹಳ್ಳಿ) ಗಲಭೆ ಸಂಬಂಧ `ಎಸ್‍ಡಿಪಿಐ-ಪಿಎಎಫ್‍ಐ' ಸೇರಿ ಕೆಲ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಮಾಹಿತಿ ಕೋರಿದ್ದು, ಆ ಮಾಹಿತಿಯನ್ನು ಆಧರಿಸಿ ಕಾನೂನಿನ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ವಿಸ್ತೃತ ಚರ್ಚೆ ನಡೆಸಲಾಗಿದೆ. ಆದರೆ, ಕೃತ್ಯದಲ್ಲಿ ಪಾಲ್ಗೊಂಡಿರುವ ಸಂಶಯದ ಹಿನ್ನೆಲೆಯಲ್ಲಿ ಮೇಲ್ಕಂಡ ಸಂಘಟನೆಗಳ ನಿಷೇಧಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ತೀರ್ಮಾನ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿ ಮಾಡುವ ಸಂಬಂಧ ರಾಜ್ಯ ಸರಕಾರ ಕಾನೂನು ತಿದ್ದುಪಡಿ ಮಾಡಲು ಸಿದ್ಧವಿದೆ. ಸಾರ್ವಜನಿಕ ಆಸ್ತಿಗೆ ಹಾನಿಯಾಗಿದ್ದರೆ ದಂಡ ವಸೂಲಿ ಮಾಡುವ ಸಂಬಂಧದ 1981ರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕ್ಲೇಮ್ ಕಮಿಷನರ್ ನೇಮಕದ ಬಳಿಕ ಅವರಿಗೆ ಕಾಯ್ದೆಯನ್ನು ಒದಗಿಸಲಾಗುವುದು ಎಂದ ಅವರು, ಈ ಸಂಬಂಧ ಉತ್ತರ ಪ್ರದೇಶದ ಕಾಯ್ದೆಯೊಂದರನ್ನು ರೂಪಿಸಿದ್ದು ಅದನ್ನು ಅಧ್ಯಯನ ಮಾಡಲಾಗುವುದು ಎಂದರು.

ಗಲಭೆಯಲ್ಲಿ ಆಸ್ತಿ ನಷ್ಟಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಪರಿಹಾರ ನೀಡಲು ಗಲಭೆಕೋರರಿಂದಲೇ ದಂಡ ವಸೂಲಿ ಮಾಡಲಾಗುವುದು. ಗಲಭೆಯಲ್ಲಿ ಪಾಲ್ಗೊಂಡಿರುವವರು ಹಾಗೂ ಕೃತ್ಯಕ್ಕೆ ಕುಮ್ಮಕ್ಕು, ಪ್ರಚೋದನೆ ನೀಡಿದವರಿಂದಲೂ ನಷ್ಟ ವಸೂಲಿ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ಈ ಸಂಬಂಧ ಶೀಘ್ರದಲ್ಲೆ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಧುಸ್ವಾಮಿ ವಿವರ ನೀಡಿದರು.

ಒತ್ತಡ: ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆ ನಿಷೇಧಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಸಚಿವರಾದ ಬವಸರಾಜ ಬೊಮ್ಮಾಯಿ, ಸಿ.ಟಿ.ರವಿ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಸಚಿವರು ಒತ್ತಾಯಿಸಿದ್ದು, ಡಿ.ಜೆ.ಹಳ್ಳಿ ಗಲಭೆ, ಮಂಗಳೂರು ಸಂಘರ್ಷ ಮತ್ತು ಮೈಸೂರಿನ ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಎಸ್‍ಡಿಪಿಐ ಸಂಘಟನೆ ಹೆಸರು ಕೇಳಿಬರುತ್ತಿದೆ ಎಂದು ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News