ನಾರಿ ಫೌಂಡೇಶನ್ ಕುರಿತು ಅಪಪ್ರಚಾರದಿಂದ ಬಡ ಕ್ಯಾನ್ಸರ್ ರೋಗಿಗಳಿಗೆ ಪೆಟ್ಟು
ಬೆಂಗಳೂರು, ಆ.20: ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ ಸಂಬಂಧ ಯಾವುದೇ ಆಧಾರ ಇಲ್ಲದೆ, ನಾರಿ ಫೌಂಡೇಶನ್ ಕುರಿತು ಅಪಪ್ರಚಾರ ಮಾಡಿದ ಕಾರಣದಿಂದಾಗಿ ಬಡ ಸ್ತನ ಕ್ಯಾನ್ಸರ್ ರೋಗಿಗಳಿಗೆ ಪೆಟ್ಟುಬಿದ್ದಂತೆ ಆಗಿದೆ ಎಂದು ಫೌಂಡೇಶನ್ ಸಂಸ್ಥಾಪಕಿ ಫಾತಿಮಾ ತಬಸ್ಸುಮ್ ಬೇಸರ ವ್ಯಕ್ತಪಡಿಸಿದರು.
ಗುರುವಾರ ನಗರದ ಹಮೀದ್ ಶಾ ಆವರಣದ ಹೈಕೋರ್ಟಿನ ಹಿರಿಯ ನ್ಯಾಯವಾದಿ ರಹಮತ್ ಉಲ್ಲಾ ಕೊತ್ವಾಲ್ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಲಾಟೆ ಪ್ರಕರಣದಲ್ಲಿ ಸದ್ಯ ಪೊಲೀಸರ ವಶದಲ್ಲಿರುವ ಸಮೀವುದ್ದೀನ್ ನನ್ನ ಪತಿಯಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದೇವೆ. ಆದರೆ, ಪತಿಗೂ ನಾರಿ ಫೌಂಡೇಶನ್‍ಗೂ ಯಾವುದೇ ಸಂಬಂಧವಿಲ್ಲ. ಸಮೀವುದ್ದೀನ್ ಈ ಫೌಂಡೇಶನ್ ನಲ್ಲಿ ಸದಸ್ಯರೂ ಸಹ ಆಗಿಲ್ಲ ಎಂದು ನುಡಿದರು.
ಫೌಂಡೇಶನ್‍ಗೆ ವಿದೇಶದಿಂದ ಭಾರೀ ಪ್ರಮಾಣದಲ್ಲಿ ಹಣ ಹರಿದುಬಂದಿದ್ದು, ಮಂಗಳೂರು ಗಲಭೆ, ಎನ್ಆರ್‍ಸಿ, ಸಿಎಎ ಪ್ರತಿಭಟನೆಗಳಿಗೆ ಖರ್ಚು ಮಾಡಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಉದ್ದೇಶ ಪೂರಕವಾಗಿ ಸುಳ್ಳುಗಳನ್ನು ಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ, ನಾವು ವಿದೇಶದಿಂದ ಫೌಂಡೇಶನ್ ಗೆ ಹಣ ಪಡೆಯುವ ಸಂಬಂಧ ಎಫ್ ಸಿಆರ್‍ಎ ಲೈಸೆನ್ಸ್ ಹಾಗೂ ಯಾವುದೇ ರೀತಿಯ ನೋಂದಣಿಯೂ ಮಾಡಿಲ್ಲ. ಹೀಗಿದ್ದರೂ, ಇಲ್ಲಸಲ್ಲದ ಆರೋಪ ಮಾಡಲಾಗುತ್ತಿರುವುದು ಖಂಡನೀಯ ಎಂದರು.
ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕಾಗಿಯೇ 2016ನೇ ಸಾಲಿನಲ್ಲಿ ನಾರಿ ಫೌಂಡೇಶನ್ ಹುಟ್ಟು ಹಾಕಲಾಯಿತು. ಇದರಲ್ಲಿ ಮೂವರು ಸದಸ್ಯರಿದ್ದು, ರಾಜಕಾರಣಿ ಜೀವರಾಜ್ ಆಳ್ವ ಅವರ ಪತ್ನಿ ನಂದಿನಿ ಆಳ್ವ ಸಹ ಓರ್ವರಾಗಿದ್ದಾರೆ. ಅಷ್ಟೇ ಅಲ್ಲದೆ, ಸ್ತನ ರೋಗ ಸಂಬಂಧ ಬಡವರಿಗಾಗಿ ಉಚಿತ ಚಿಕಿತ್ಸೆ ಮಾಡಲಾಗುತ್ತಿದೆ. ಜೊತೆಗೆ, ಶಿಕ್ಷಣ, ಸಹಾಯಧನ ನೀಡಿ, ಉದ್ಯೋಗ ಸೃಷ್ಟಿಗೂ ಫೌಂಡೇಶನ್ ಶ್ರಮಿಸುತ್ತಿದೆ ಎಂದು ತಬಸ್ಸುಮ್ ಸ್ಪಷ್ಟನೆ ನೀಡಿದರು.
ಕೆಲ ಮಾಧ್ಯಮಗಳಲ್ಲಿ ಅಪಪ್ರಚಾರ ಕಾರಣದಿಂದಾಗಿ ಬಡವರಿಗಾಗಿ ದುಡಿಯುತ್ತಿದ್ದ ನಾರಿ ಫೌಂಡೇಶನ್‍ಗೆ ಧಕ್ಕೆ ಉಂಟಾಗಬಹುದು. ಹೀಗಾಗಿ, ಯಾವುದೇ ಮಾಹಿತಿ ಪ್ರಕಟಿಸಬೇಕಾದಲ್ಲಿ, ಒಮ್ಮೆ ಪರಿಶೀಲಿಸಿ, ತಮ್ಮ ಅಭಿಪ್ರಾಯಗಳನ್ನು ಕೇಳಿ ಎಂದು ಮನವಿ ಮಾಡಿದ ಅವರು, ಫೌಂಡೇಶನ್ ಬ್ಯಾಂಕಿನ ಖಾತೆಯೂ ಸಾರ್ವಜನಿಕರಿಗೆ ಮೀಸಲಿಡಲಾಗಿದೆ. ಇದನ್ನು ಯಾರು ಸಹ ನೋಡಬಹುದಾಗಿದೆ. ಅಲ್ಲದೆ, ಲಾಕ್‍ಡೌನ್ ಪರಿಣಾಮದಿಂದಾಗಿ ಬಾಡಿಗೆ ಪಾವತಿ ಮಾಡದ ಕಾರಣದಿಂದಾಗಿ ನಗರದಲ್ಲಿದ್ದ ಕಚೇರಿಯನ್ನು ಖಾಲಿ ಮಾಡಿ, ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿ ಭಾವುಕರಾದರು.
ಸುದ್ದಿಗೋಷ್ಠಿಯಲ್ಲಿ ಹೈಕೋರ್ಟಿನ ಹಿರಿಯ ನ್ಯಾಯವಾದಿ ರಹಮತ್ ಉಲ್ಲಾ ಕೊತ್ವಾಲ್ ಉಪಸ್ಥಿತರಿದ್ದರು.