ಯುವ ಪೀಳಿಗೆಯ ಸಾಮರ್ಥ್ಯ ಗುರುತಿಸಿ ಕಾಂಗ್ರೆಸ್‍ನಲ್ಲಿ ಸೂಕ್ತ ಸ್ಥಾನ: ಡಿ.ಕೆ.ಶಿವಕುಮಾರ್
ಬೆಂಗಳೂರು, ಆ.20: ಮುಂದಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಕಾಂಗ್ರೆಸ್‍ನಲ್ಲಿ ಸೂಕ್ತವಾದ ಸ್ಥಾನ ಕೊಡುವುದರ ಮೂಲಕ ನಾಯಕರನ್ನಾಗಿ ರೂಪಿಸಲಾಗುವುದೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ಜನ್ಮದಿನಾಚರಣೆ ಕಾರ್ಯಕ್ರಮ ಹಾಗೂ ಬಿಜೆಪಿ ವಿರುದ್ದ ಆರಂಭವಾಗಿರುವ ಜನಧ್ವನಿ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಬಳಸಿಕೊಳ್ಳುವ ಮೂಲಕ ಪಕ್ಷಕ್ಕೆ ಹಾಗೂ ದೇಶಕ್ಕಾಗಿ ನಾಯಕರನ್ನು ರೂಪಿಸಬೇಕಾಗಿದೆ ಎಂದರು.
ಇಂದಿರಾಗಾಂಧಿಯ ಮಗ ನಾಯಕನಾಗುವುದು ಹೆಚ್ಚುಗಾರಿಕೆಯಲ್ಲ. ಪ್ರತಿ ಹಳ್ಳಿಯಿಂದಲೂ ನಾಯಕರು ರೂಪಗೊಳ್ಳಬೇಕೆಂಬುದು ರಾಜೀವ್ ಗಾಂಧಿಯವರ ಆಶಯವಾಗಿತ್ತು. ಆ ನಿಟ್ಟಿನಲ್ಲಿ ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್‍ಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದರು. ಅವರ ಆಶಯದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಅವರು ಹೇಳಿದರು.
ಇವತ್ತು ದೇಶದ ಐಟಿ, ಬಿಟಿ ಕಂಪೆನಿಗಳು ಜಗತ್ತಿನಲ್ಲಿ ಮುಂಚೂಣಿಯಲ್ಲಿವೆ ಎಂದರೆ ರಾಜೀವ್ ಗಾಂಧಿ ರೂಪಿಸಿದ ಯೋಜನೆಗಳೇ ಆಗಿವೆ. ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿನ ಪ್ರೋತ್ಸಾಹದಿಂದ ದೇಶವು ನಾನಾ ಕ್ಷೇತ್ರಗಳಲ್ಲಿ ಸಾಕಷ್ಟು ಮುಂದುವರಿದಿದೆ. ದೇಶವು ಪ್ರಗತಿಯತ್ತ ಸಾಗುವಲ್ಲಿ ಕಾಂಗ್ರೆಸ್ ರೂಪಿಸಿದ ಯೋಜನೆಗಳೇ ಕಾರಣವೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಸಲೀಂ ಅಹ್ಮದ್ ಮತ್ತಿತರರಿದ್ದರು.
ದೇವರಾಜ ಅರಸರು ಉಳುವವನನ್ನೇ ಭೂಮಿ ಒಡೆಯನನ್ನಾಗಿ ಮಾಡಿದರು. ಬಗರ್ ಹುಕುಂ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದವರಿಗೆ ಸಾಗುವಳಿ ಪತ್ರ ನೀಡಿದರು. ಕಾಂಗ್ರೆಸ್ ರೈತ-ಕೂಲಿ ಕಾರ್ಮಿಕರ, ಬಡವರ ಪರವಾದ ಯೋಜನೆಗಳನ್ನು ರೂಪಿಸಿದೆ. ಆದರೆ, ಬಿಜೆಪಿ ಅದನ್ನು ಶ್ರೀಮಂತರ, ಬಂಡವಾಳಶಾಹಿಗಳ ಪರವಾಗಿ ತಿದ್ದುಪಡಿ ಮಾಡುತ್ತಿದೆ. ಕೋವಿಡ್-19 ಸಂತ್ರಸ್ತರಿಗೆ, ರೈತರಿಗೆ, ಕಾರ್ಮಿಕರಿಗೆ ಸೂಕ್ತ ಪರಿಹಾರ ಕೊಟ್ಟಿಲ್ಲ. ಕಳೆದ ವರ್ಷ ನೆರೆ ಹಾವಳಿಯಲ್ಲಿ ಸಂತ್ರಸ್ತಗೊಂಡ ಜನತೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಈ ವರ್ಷ ಪುನಃ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಸಂಭವಿಸಿದೆ. ಈ ಸಂತ್ರಸ್ತರಿಗೆ ಕೇಂದ್ರದಿಂದ ಸೂಕ್ತ ಪರಿಹಾರ ಕೊಡಿಸಲು ಬಿಜೆಪಿ ಸಂಸದರಿಂದ ಆಗಿಲ್ಲವೆಂದರೆ, ನಮ್ಮನ್ನಾದರು ಕರೆದುಕೊಂಡು ಹೋಗಿ. ನಾವು ಕೇಳುತ್ತೇವೆ. ನಿಮ್ಮ ಅಧಿಕಾರಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ