ಬೆಂಗಳೂರು ಹಿಂಸಾಚಾರ ಪ್ರಕರಣ: ಕೆಲ ಆರೋಪಿಗಳ ವಿರುದ್ಧ ಯುಎಪಿಎ ಅಡಿ ಮೊಕದ್ದಮೆ ದಾಖಲು
ಬೆಂಗಳೂರು, ಆ.20: ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ ಸಂಬಂಧ ಕೆಲ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿ ಮೊಕದ್ದಮೆ ದಾಖಲಿಸಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ವರದಿಯಾಗಿದೆ.
ಪ್ರಮುಖ 61 ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಲಿದೆ. ಪ್ರಕರಣದ ಪ್ರಮುಖ ಆರೋಪಿಗಳು ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪೈಕಿ ಗಲಭೆಯಲ್ಲಿ ಮುಂದಾಳತ್ವ ವಹಿಸಿದ್ದ 61 ಜನರ ವಿರುದ್ಧ ವಿಚಾರಣೆಯೂ ಚುರುಕುಗೊಳಿಸಲಾಗಿದೆ ಎನ್ನಲಾಗಿದೆ.
ಗಲಾಟೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಖಾಲೀದ್ ಎಂಬಾತನನ್ನು ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಡಿಜೆ ಹಳ್ಳಿಯ ರೋಷನ್ ನಗರದ ನಿವಾಸಿಯಾಗಿದ್ದ ಖಾಲೀದ್, ಕೆಲ ಸಂಘಟನಾಕಾರರನ್ನು ಜೊತೆಗೂಡಿಸಿ ಗಲಾಟೆಯಲ್ಲಿ ಪಾಲ್ಗೊಂಡಿದ್ದ ಎನ್ನಲಾಗಿದೆ. ಈತನೊಂದಿಗೆ ಹಲವು ಪ್ರಮುಖ ರಾಜಕೀಯ ನಾಯಕರು ಸಂಪರ್ಕದಲ್ಲಿರುವ ಮಾಹಿತಿ ಇದ್ದು, ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.