'ಹಿಂದಿ ಅರ್ಥವಾಗದಿದ್ದರೆ ಹೊರನಡೆಯಬಹುದು': ಕೇಂದ್ರ ಆಯುಷ್ ಕಾರ್ಯದರ್ಶಿಯ ಹೇಳಿಕೆ ವಿರುದ್ಧ ವೈದ್ಯರ ಆಕ್ರೋಶ

Update: 2020-08-22 11:52 GMT

ಹೊಸದಿಲ್ಲಿ: ಕೇಂದ್ರ ಆಯುಷ್ ಸಚಿವಾಲಯ ಯೋಗ ಮಾಸ್ಟರ್ಸ್ ಟ್ರೈನರ್ಸ್‍ ಗೆ ಆಯೋಜಿಸಿದ್ದ  ವರ್ಚುವಲ್  ಸಮ್ಮೇಳನದಲ್ಲಿ ಕೇಂದ್ರ ಆಯುಷ್ ಕಾರ್ಯದರ್ಶಿ ರಾಜೇಶ್ ಕೊಟೇಚ ಮಾತನಾಡುತ್ತಾ ತನಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ. ಯಾರಿಗೆ ಹಿಂದಿ ಅರ್ಥವಾಗುವುದಿಲ್ಲವೋ ಅವರು ಹೊರ ನಡೆಯಬಹುದು ಎಂದು ಹೇಳಿರುವುದು ವಿವಾದಕ್ಕೀಡಾಗಿದೆ.

ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ತಮಿಳುನಾಡಿನ ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪತಿ ವೈದ್ಯರು ಕೇಂದ್ರ ಕಾರ್ಯದರ್ಶಿಯ ವರ್ತನೆಯನ್ನು ‘ಅವಮಾನಕರ' ಎಂದು ಬಣ್ಣಿಸಿದ್ದಾರಲ್ಲದೆ, ಈ ಮೂರು ದಿನಗಳ ಸಮ್ಮೇಳನದುದ್ದಕ್ಕೂ  ತಾರತಮ್ಯಕಾರಿ ನಿಲುವು ತಳೆಯಲಾಗಿತ್ತು ಎಂದು ಆರೋಪಿಸಿದ್ದಾರೆ.

ಒಟ್ಟು 300 ನ್ಯಾಚುರೋಪತಿ ವೈದ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ತಮಿಳುನಾಡಿನಿಂದ 37 ಸರಕಾರಿ ಆಸ್ಪತ್ರೆಗಳ ವೈದ್ಯರು ಭಾಗವಹಿಸಿದ್ದರು. ಆಗಸ್ಟ್ 18ರಿಂದ 20ರ ತನಕ ಆಯುಷ್ ಸಚಿವಾಲಯ ಹಾಗೂ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ಆರು ಅಧಿವೇಶನಗಳಲ್ಲಿ  ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಕುರಿತು ಪೂರಕ ಮಾಹಿತಿ ಹಾಗೂ ಚರ್ಚೆ ನಡೆಸಲಾಗಿತ್ತು.

“ಮೊದಲ ದಿನದಿಂದಲೂ ಕನಿಷ್ಠ ನಾಲ್ಕು ಅಧಿವೇಶನ ಹಿಂದಿಯಲ್ಲಿತ್ತು, ಕೆಲವರು ಕೆಲ ವಿಷಯಗಳನ್ನು ಇಂಗ್ಲಿಷಿನಲ್ಲಿ ಹೇಳಲು ಯತ್ನಿಸಿದ್ದರೂ ಅಂತಿಮವಾಗಿ ಎಲ್ಲವೂ ಹಿಂದಿಯಲ್ಲಿತ್ತು.  ನಮಗೆ ಹಿಂದಿ ಸರಿಯಾಗಿ ಅರ್ಥವಾಗುತ್ತಿಲ್ಲ, ಈ ವಿಚಾರವನ್ನೆತ್ತಿದ್ದರೂ ಪ್ರಯೋಜನವಾಗಿಲ್ಲ,'' ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯರೊಬ್ಬರು ಹೇಳಿದ್ದಾರೆ.

ಈ ರೀತಿ ಅಸಮಾಧಾನ ಮುಂದುವರಿದಂತೆಯೇ ಆಯುಷ್ ಸಚಿವಾಲಯದ ಕಾರ್ಯದರ್ಶಿಯ ಮಾತುಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ತಮ್ಮ ಭಾಷಣವನ್ನು ಹಿಂದಿಯಲ್ಲಿ ಆರಂಭಿಸಿದ ಅವರು “ಕಳೆದೆರಡು ದಿನಗಳಿಂದ ಸಮಯ ಮಾಡಿಕೊಂಡು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಧನ್ಯವಾದಗಳು. ಕಳೆದೆರಡು ದಿನಗಳಿಂದ ಸಮಸ್ಯೆಯಾಗಿದೆ ಎಂಬ ಮಾಹಿತಿ ದೊರಕಿದೆ, ಬೇಕಿದ್ದರೆ ಜನರು ಹೊರನಡೆಯಬಹುದು. ನಾನು ಇಂಗ್ಲಿಷ್ ಚೆನ್ನಾಗಿ ಮಾತನಾಡುವುದಿಲ್ಲ, ಆದುದರಿಂದ ನಾನು ಹಿಂದಿ ಮಾತನಾಡುತ್ತೇನೆ'' ಎಂದಿದ್ದರು

ಇಂಗ್ಲಿಷಿನಲ್ಲಿ ಮಾತನಾಡಿ ಎಂದು ಮನವಿ ಮಾಡಿ ಎಂದು ತಮಿಳುನಾಡಿನ ಹಲವು ವೈದ್ಯರು ಚ್ಯಾಟ್ ಸಂದೇಶ ಕಳುಹಿಸಿದ ಹೊರತಾಗಿಯೂ ಅವರು ಹಾಗೆ ಹೇಳಿರುವುದು ವಿವಾದಕ್ಕೀಡಾಗಿದೆ.

ಈ ಕುರಿತು ವೈದ್ಯರು ಆಯುಷ್ ಸಚಿವಾಲಯಕ್ಕೆ ಪತ್ರವನ್ನೂ ಬರೆದಿದ್ದಾರೆ. ತಮಿಳುನಾಡು ಸರಕಾರ ಕೂಡ  ವೈದ್ಯರಿಂದ   ಈ ಸಮ್ಮೇಳನ ಕುರಿತು ಮಾಹಿತಿ ಕೋರಿದ್ದು ಅದರ ಆಧಾರದಲ್ಲಿ ವರದಿ ಸಲ್ಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News