ವಿಶ್ವಾದ್ಯಂತ ಕಳೆದ ವಾರ ವರದಿಯಾದ ಕೋವಿಡ್-19 ಪ್ರಕರಣಗಳ ಪೈಕಿ ಭಾರತದ ಪಾಲು ಶೇ.26

Update: 2020-08-25 03:44 GMT

ಹೊಸದಿಲ್ಲಿ, ಆ.25: ಕಳೆದ ವಾರ ವಿಶ್ವಾದ್ಯಂತ ವರದಿಯಾದ ಒಟ್ಟು ಕೋವಿಡ್-19 ಪ್ರಕರಣಗಳ ಪೈಕಿ ಶೇಕಡ 26.2ರಷ್ಟು ಪ್ರಕರಣಗಳು ಭಾರತದಿಂದ ವರದಿಯಾಗಿವೆ. ಜಾಗತಿಕವಾಗಿ ಈ ಮಾರಕ ಸೋಂಕಿಗೆ ಬಲಿಯಾದವರಲ್ಲಿ ಶೇಕಡ 16.9 ಮಂದಿ ಭಾರತೀಯರು. ಇದೇ ಮೊದಲ ಬಾರಿಗೆ ವಿಶ್ವದ ಒಟ್ಟು ಪ್ರಕರಣಗಳ ಪೈಕಿ ಶೇಕಡ 25ಕ್ಕಿಂತ ಅಧಿಕ ಪ್ರಕರಣಗಳು ಭಾರತದಿಂದ ವರದಿಯಾಗಿವೆ.

ಏತನ್ಮಧ್ಯೆ ಸೋಮವಾರ ದೇಶದಲ್ಲಿ ಏಳು ದಿನಗಳಲ್ಲೇ ಕನಿಷ್ಠ ಅಂದರೆ 59,041 ಪ್ರಕರಣಗಳು ದಾಖಲಾಗಿವೆ. ಕಳೆದ ಶುಕ್ರವಾರ ದೇಶದಲ್ಲಿ ದಾಖಲೆ ಅಂದರೆ 10.3 ಲಕ್ಷ ಪರೀಕ್ಷೆಗಳು ನಡೆದಿದ್ದು, ಬಳಿಕ ಪರೀಕ್ಷೆ ಶೇಕಡ 40ರಷ್ಟು ಕಡಿಮೆಯಾಗಿದೆ. ಸೋಮವಾರ 848 ಸೋಂಕಿತರು ಮೃತಪಟ್ಟಿದ್ದು, ಆಗಸ್ಟ್ ನಾಲ್ಕರ ಬಳಿಕ ಇದು ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ.

ಕಳೆದ ವಾರ ದೇಶದಲ್ಲಿ 4.5 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಇದು ವಿಶ್ವಾದ್ಯಂತ ವರದಿಯಾದ ಪ್ರಕರಣಗಳ ಶೇಕಡ 26ರಷ್ಟಾಗಿದೆ. ಆಗಸ್ಟ್ 10ರಿಂದ 16ರ ಅವಧಿಯಲ್ಲಿ ಶೇಕಡ 23.9 ಹಾಗೂ ಆಗಸ್ಟ್ 3-9ರ ವಾರದಲ್ಲಿ ಶೇಕಡ 22.7 ಪ್ರಕರಣಗಳು ಭಾರತದಿಂದ ವರದಿಯಾಗಿದ್ದವು ಎಂದು ವರ್ಲ್ಡೋಮೀಟರ್ಸ್‌.ಇನ್ಫೋ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ವಿಶ್ವಾದ್ಯಂತ ಒಟ್ಟು ದಾಖಲಾದ ಪ್ರಕರಣಗಳ ಪೈಕಿ ಭಾರತದ ಪಾಲು ಶೇಕಡ 13ರಷ್ಟಿದೆ. ಕಳೆದ ವಾರ ವಿಶ್ವದಲ್ಲಿ ಸಂಭವಿಸಿದ ಒಟ್ಟು ಸಾವಿನ ಪೈಕಿ ಶೇಕಡ 16.9ರಷ್ಟು ಸಾವು ಭಾರತದಲ್ಲಿ ಸಂಭವಿಸಿದ್ದು, ಹಿಂದಿನ ಎರಡು ವಾರಗಳಲ್ಲಿ ಕ್ರಮವಾಗಿ ಶೇಕಡ 16.8 ಹಾಗೂ 15.2ರಷ್ಟು ಸಾವು ಭಾರತದಿಂದ ವರದಿಯಾಗಿತ್ತು.

ಮಹಾರಾಷ್ಟ್ರ, ಆಂಧ್ರ ಪ್ರದೇಶ, ರಾಜಸ್ಥಾನ, ಪಂಜಾಬ್ ಹಾಗೂ ಛತ್ತೀಸ್‌ಗಢ ಹೊರತುಪಡಿಸಿದರೆ, ಉಳಿದೆಲ್ಲ ರಾಜ್ಯಗಳಲ್ಲಿ ರವಿವಾರ ದಾಖಲಾದ ಪ್ರಕರಣಗಳಿಗಿಂತ ಕಡಿಮೆ ಸಂಖ್ಯೆಯ ಪ್ರಕರಣಗಳು ಸೋಮವಾರ ವರದಿಯಾಗಿವೆ. ಮಧ್ಯಪ್ರದೇಶದಲ್ಲಿ ಇದುವರೆಗಿನ ಗರಿಷ್ಠ ಅಂದರೆ 1,292 ಹೊಸ ಪ್ರಕರಣಗಳು ಸೋಮವಾರ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News