ಮಹಿಳೆಯರ ವಿವಾಹ ಕನಿಷ್ಟ ಪ್ರಾಯಮಿತಿ ಹೆಚ್ಚಳ ಬೇಡ: ಸಾಮಾಜಿಕ ಸಂಘಟನೆಗಳ ಆಗ್ರಹ

Update: 2020-08-25 17:00 GMT

ಹೊಸದಿಲ್ಲಿ, ಆ.25: ಮಹಿಳೆಯರ ವಿವಾಹ ಕನಿಷ್ಟ ಪ್ರಾಯಮಿತಿ ಹೆಚ್ಚಳ ಮಾಡದಂತೆ 100ಕ್ಕೂ ಹೆಚ್ಚು ಸಾಮಾಜಿಕ ಸಂಘಟನೆಗಳು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದು, ಪ್ರಾಯಮಿತಿ ಹೆಚ್ಚಳದಿಂದ ತಾಯಿ ಹಾಗೂ ಶಿಶುವಿನ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಆಗದು ಎಂದು ಅಭಿಪ್ರಾಯಪಟ್ಟಿವೆ.

ವಿವಾಹದ ಕನಿಷ್ಟ ಪ್ರಾಯಮಿತಿ ಹೆಚ್ಚಳದಿಂದ ಇನ್ನಷ್ಟು ಮಹಿಳೆಯರು ವೈವಾಹಿಕ ಸ್ಥಾನಮಾನ ಮತ್ತು ಹಕ್ಕಿನಿಂದ ವಂಚಿತರಾಗಲಿದ್ದಾರೆ. ಕಾನೂನಿನ ಮೂಲಕ ವಿವಾಹದ ಪ್ರಾಯ ಮಿತಿ ಹೆಚ್ಚಳವು ಮಹಿಳೆಯರ ಶೀಘ್ರ ವಿವಾಹವನ್ನು ತಡೆಯುವುದಿಲ್ಲ ಅಪರಾಧೀಕರಿಸುತ್ತದೆ ಅಷ್ಟೇ ಎಂದು ಸಾಮಾಜಿಕ ಹಕ್ಕುಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುವ ಸಂಘಟನೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಮಹಿಳೆಯರ ವಿವಾಹ ಕನಿಷ್ಟ ಪ್ರಾಯಮಿತಿಯನ್ನು ಹೆಚ್ಚಿಸಲು ನಿರ್ಧರಿಸಿರುವ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕಾರ್ಯಪಡೆಯನ್ನು ರಚಿಸಿದೆ. ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣದಲ್ಲೂ ಇದನ್ನು ಉಲ್ಲೇಖಿಸಿದ್ದರು. ಈಗ ದೇಶದಲ್ಲಿ ಮಹಿಳೆಯರ ವಿವಾಹ ಕನಿಷ್ಟ ಪ್ರಾಯಮಿತಿ 18 ವರ್ಷ, ಪುರುಷರ ವಿವಾಹ ಕನಿಷ್ಟ ಪ್ರಾಯಮಿತಿ 21 ವರ್ಷ. ಮಹಿಳೆ, ಪುರುಷರ ವಿವಾಹ ಕನಿಷ್ಟ ಪ್ರಾಯಮಿತಿಯನ್ನು 21 ವರ್ಷಕ್ಕೆ ನಿಗದಿಗೊಳಿಸುವುದು ಸರಕಾರದ ಉದ್ದೇಶವಾಗಿದ್ದು ಇದು ಲಿಂಗ ಸಮಾನತೆಯ , ಮಹಿಳಾ ಸಬಲೀಕರಣದ ಸಂಕೇತವಾಗಿದೆ ಎಂದು ಸರಕಾರ ಹೇಳಿದೆ.

ಆದರೆ, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಹಿಳೆ ಮತ್ತು ಪುರುಷರ ಕನಿಷ್ಟ ವಿವಾಹ ಪ್ರಾಯಮಿತಿ 18 ವರ್ಷ. ಆದ್ದರಿಂದ ಭಾರತದಲ್ಲೂ 18 ವರ್ಷಕ್ಕೆ ಇಳಿಸುವುದು ಸೂಕ್ತ ಎಂದು ಸಂಘಟನೆಗಳು ಆಗ್ರಹಿಸಿವೆ. ಕಾನೂನು ಬದಲಾವಣೆಯ ಮೂಲಕವೇ ಉದ್ದೇಶಗಳನ್ನು ಸಾಧಿಸಬಹುದು ಎಂಬ ರೀತಿಯಲ್ಲಿ ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಕಾನೂನುಗಳನ್ನು ಹೆಚ್ಚು ಶಿಕ್ಷಾರ್ಹವಾಗಿಸುವ ಪ್ರಯತ್ನ ನಡೆಯುತ್ತದೆ. ಮಹಿಳೆಯರಿಗೆ ಉನ್ನತ ಶಿಕ್ಷಣ , ಉತ್ತಮ ಉದ್ಯೋಗದ ಅವಕಾಶ ಲಭ್ಯವಾಗಿಸಲು ಕ್ರಮ ಕೈಗೊಳ್ಳದೆ ಕೇವಲ ವಯಸ್ಸಿನ ಬದಲಾವಣೆಯಿಂದ ಏನನ್ನೂ ಸಾಧಿಸಲಾಗದು. ಮಹಿಳೆಯರು ಇನ್ನಷ್ಟು ವರ್ಷ ಹುಟ್ಟಿದ ಮನೆಯಲ್ಲೇ ಇರುವಂತಾಗುತ್ತದೆ. ಅಲ್ಲದೆ ವರದಕ್ಷಿಣೆ ಹಾಗೂ ಮದುವೆ ವೆಚ್ಚ ದಿನೇ ದಿನೇ ಹೆಚ್ಚುತ್ತಿರುವ ಈ ಸಮಯದಲ್ಲಿ ಹೆಣ್ಮಕ್ಕಳ ವಿವಾಹಕ್ಕೆ ಮತ್ತೂ 3 ವರ್ಷ ಕಾಯುವುದು ಬಡ ಕುಟುಂಬದವರ ಬವಣೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ವಿವಾಹದ ಪ್ರಾಯಮಿತಿ ಹೆಚ್ಚಿಸುವ ಬದಲು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು, ಉದ್ಯೋಗ ಖಾತರಿ ಒದಗಿಸುವುದು, ಹದಿಹರೆಯದವರಿಗೆ ಕಲಿಯುವಾಗಲೇ ಸಂಪಾದಿಸುವ ಅವಕಾಶ ಒದಗಿಸುವುದು, ಹದಿಹರೆಯದವರಲ್ಲಿ ವಿಶೇಷವಾಗಿ ಹುಡುಗಿಯರಲ್ಲಿ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಅಂಗನವಾಡಿಯಿಂದ ಶಾಲೆಯ ಹಂತದವರೆಗೆ ಪೌಷ್ಟಿಕ ಆಹಾರ ಒದಗಿಸುವ ವ್ಯವಸ್ಥೆ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಸಂಘಸಂಸ್ಥೆಗಳು ಹೇಳಿಕೆಯಲ್ಲಿ ಆಗ್ರಹಿಸಿವೆ.

  ‘ಸೆಂಟರ್ ಫಾರ್ ಚೈಲ್ಡ್ ರೈಟ್ಸ್’ನ ಸಹಸಂಸ್ಥಾಪಕಿ ಏನಾಕ್ಷಿ ಗಂಗೂಲಿ, ‘ನ್ಯಾಷನಲ್ ಕೋಅಲಿಶನ್ ಅಡ್ವೋಕೇಟಿಂಗ್ ಫಾರ್ ಅಡೋಲ್ಸೆಂಟ್ ಕನ್ಸರ್ನ್ಸ್’ನ ಕಾರ್ಯನಿರ್ವಾಹಕ ನಿರ್ದೇಶಕಿ ಮಧು ಮೆಹ್ರಾ, ಸೆಂಟರ್ ಫಾರ್ ವುಮೆನ್ಸ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಮೇರಿ ಜಾನ್, ಮಕ್ಕಳ ಹಕ್ಕಿಗಾಗಿ ಕಾರ್ಯನಿರ್ವಹಿಸುವ ಸಂಘಟನೆಯ ನಿರ್ದೇಶಕಿ ಕವಿತಾ ರತ್ನ ಹೇಳಿಕೆಗೆ ಸಹಿ ಹಾಕಿದವರಲ್ಲಿ ಪ್ರಮುಖರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News