ಟಿಪ್ಪು ಸುಲ್ತಾನರ ವಂಶಸ್ಥೆ ನೂರ್ ಇನಾಯತ್ ಖಾನ್‌ಗೆ ಬ್ರಿಟನ್‌ನ ಉನ್ನತ ಗೌರವ

Update: 2020-08-28 15:53 GMT

ಲಂಡನ್, ಆ. 28: ದ್ವಿತೀಯ ವಿಶ್ವಯುದ್ಧದಲ್ಲಿ ಬ್ರಿಟಿಷರ ಪರ ಗೂಢಚಾರಿಣಿಯಾಗಿ ಕಾರ್ಯನಿರ್ವಹಿಸಿದ್ದ ನೂರ್ ಇನಾಯತ್ ಖಾನ್‌ಗೆ ಲಂಡನ್‌ನ ಉನ್ನತ ಗೌರವ ‘ಮೆಮೋರಿಯಲ್ ಬ್ಲೂ ಪ್ಲೇಖ್’ (ನೀಲಿ ಫಲಕದ ಗೌರವ) ಘೋಷಿಸಲಾಗಿದ್ದು ಶುಕ್ರವಾರ ಸೆಂಟ್ರಲ್ ಲಂಡನ್‌ನಲ್ಲಿರುವ ಅವರ ಕುಟುಂಬಿಕರ ಮನೆಯಲ್ಲಿ ಗೌರವ ಫಲಕ ಪ್ರದಾನ ಮಾಡಲಾಗಿದೆ.

ಬ್ಲೂಫೇಕ್ ಗೌರವ ಪಡೆದ ಭಾರತೀಯ ಮೂಲದ ಪ್ರಥಮ ಮಹಿಳೆ ಎಂಬ ಹಿರಿಮೆಗೂ ನೂರ್ ಪಾತ್ರರಾಗಿದ್ದಾರೆ. ‘ನೂರ್ ಇನಾಯತ್ ಖಾನ್ ಜಿಸಿ, 1914-44, ಮ್ಯಾಡೆಲಿನ್ ಎಂಬ ಗುಪ್ತನಾಮದಲ್ಲಿ ಕಾರ್ಯನಿರ್ವಹಿಸಿದ್ದ ಎಸ್‌ಒಇ ಏಜೆಂಟ್ ಇಲ್ಲಿ ವಾಸಿಸಿದ್ದರು’ ಎಂದು ಫಲಕದಲ್ಲಿ ಬರೆಯಲಾಗಿದೆ. ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್ ಸಹಿತ ಇತರ ಹಲವು ಭಾರತೀಯರೂ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

‘ಇಂಗ್ಲಿಷ್ ಹೆರಿಟೇಜ್ ಚಾರಿಟಿ’ ನಡೆಸುತ್ತಿರುವ ‘ದಿ ಬ್ಲೂ ಪ್ಲೇಖ್’ ಯೋಜನೆಯು ಇಂಗ್ಲೆಂಡಿನಾದ್ಯಂತ ನಿರ್ದಿಷ್ಟ ಸ್ಥಳಗಳೊಂದಿಗೆ ಸಂಪರ್ಕ ಹೊಂದಿದ್ದ ಪ್ರಖ್ಯಾತ ವ್ಯಕ್ತಿಗಳನ್ನು ಮತ್ತು ಸಂಘಸಂಸ್ಥೆಗಳನ್ನು ಗೌರವಿಸುವ ಉದ್ದೇಶ ಹೊಂದಿದೆ. ಇನಾಯತ್ ಖಾನ್ ಅವರ ಫಲಕವನ್ನು ಬ್ಲೂಮ್ಸ್‌ ಬರಿಯ 4 ಟ್ಯಾವಿಟನ್ ಮಾರ್ಗದಲ್ಲಿ ಅನಾವರಣ ಮಾಡಲಾಗಿದೆ. 1943ರಲ್ಲಿ ನಾಝಿಗಳ ವಶದಲ್ಲಿದ್ದ ಫ್ರಾನ್ಸ್‌ನಲ್ಲಿ ಬ್ರಿಟನ್‌ನ ‘ಸ್ಪೆಷಲ್ ಆಪರೇಷನ್ಸ್ ಎಕ್ಸಿಕ್ಯೂಟಿವ್(ಎಸ್‌ಒಇ)ನ ರೇಡಿಯೋ ಆಪರೇಟರ್ ಆಗಿ ಕಾರ್ಯ ನಿರ್ವಹಿಸಲು ತೆರಳುವ ಮೊದಲಿನ ದಿನಗಳಲ್ಲಿ ನೂರ್ ಇದೇ ಸ್ಥಳದಲ್ಲಿ ವಾಸಿಸುತ್ತಿದ್ದರು.

ಮುಂದೊಂದು ದಿನ ತಾನು ‘ಶೌರ್ಯತ್ವದ ಸಂಕೇತ’ವಾಗಿ ಗುರುತಿಸಲ್ಪಡುತ್ತೇನೆ ಎಂಬುದನ್ನು , ಫ್ರಾನ್ಸ್‌ಗೆ ತೆರಳುವ ಮುನ್ನ ನೂರ್ ಕನಸಿನಲ್ಲೂ ಕಲ್ಪಿಸಿರಲಿಕ್ಕಿಲ್ಲ ಎಂದು ಇತಿಹಾಸಜ್ಞೆ ಮತ್ತು ‘ಸ್ಪೈ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್’ ಎಂಬ ಕೃತಿಯ ಲೇಖಕಿ ಶ್ರಬಾಣಿ ಬಸು ಹೇಳಿದ್ದಾರೆ.

ಅನಿರೀಕ್ಷಿತವಾಗಿ ಗೂಢಚಾರಿಣಿಯಾದವರು ನೂರ್. ಓರ್ವ ಸೂಫಿಯಾಗಿ ಅಹಿಂಸೆ ಮತ್ತು ಧಾರ್ಮಿಕ ಸಾಮರಸ್ಯದಲ್ಲಿ ವಿಶ್ವಾಸವಿದ್ದವರು. ಆದರೂ, ತಾನು ನೆಲೆಸಿದ್ದ ದೇಶಕ್ಕೆ ತನ್ನ ಅಗತ್ಯವಿದೆ ಎಂದಾಗ ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ದೃಢ ಸಂಕಲ್ಪದಿಂದ ತೊಡಗಿಕೊಂಡವರು ಎಂದು ಸರಳ ಸಮಾರಂಭದಲ್ಲಿ ಗೌರವ ಫಲಕವನ್ನು ಅನಾವರಣಗೊಳಿಸಿದ ಬಸು ಹೇಳಿದ್ದಾರೆ. ಸ್ಥಾಪಕಾಧ್ಯಕ್ಷರಾಗಿರುವ ಬಸು ಸ್ಥಾಪಕಾಧ್ಯಕ್ಷರಾಗಿರುವ ನೂರ್ ಇನಾಯತ್ ಖಾನ್ ಸ್ಮಾರಕ ಟ್ರಸ್ಟ್‌ನ ಆಶ್ರಯದಲ್ಲಿ 2012ರಲ್ಲಿ ಲಂಡನ್‌ನ ಗಾರ್ಡನ್ ವೃತ್ತದಲ್ಲಿ ನೂರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಹಲವು ತಿಂಗಳ ವಿರಾಮದ ಬಳಿಕ ನಡೆದ ಮೊದಲ ವರ್ಚುವಲ್ ಕಾರ್ಯಕ್ರಮದಲ್ಲಿ ನೂರ್ ಇನಾಯತ್ ಖಾನ್‌ರಂತಹ ಧೈರ್ಯಶಾಲಿ ಮಹಿಳೆಗೆ ಗೌರವ ಸೂಚಿಸಿರುವುದಕ್ಕೆ ನನಗೆ ವಿಶೇಷ ಸಂತಸವಾಗಿದೆ ಎಂದು ಇಂಗ್ಲಿಷ್ ಹೆರಿಟೇಜ್‌ನ ನಿರ್ದೇಶಕಿ ಅನ್ನಾ ಈವಿಸ್ ಹೇಳಿದ್ದಾರೆ.

ಟಿಪ್ಪು ವಂಶಸ್ಥರು

18ನೇ ಶತಮಾನದಲ್ಲಿ ಮೈಸೂರಿನ ರಾಜರಾಗಿದ್ದ ಟಿಪ್ಪು ಸುಲ್ತಾನರ ವಂಶಸ್ಥರಾಗಿದ್ದ ನೂರ್ ಇನಾಯತ್‌ಖಾನ್ , ಭಾರತದ ಸೂಫಿ ಸಂತ ಹಝ್ರತ್ ಇನಾಯತ್ ಖಾನ್‌ರ ಮಗಳು. ಜರ್ಮನರ ವಶದಲ್ಲಿದ್ದ ಫ್ರಾನ್ಸ್‌ನಲ್ಲಿ ರೇಡಿಯೋ ಆಪರೇಟರ್ ಜೊತೆ, ಗೂಢಚಾರಿಣಿಯಾಗಿ ಕಾರ್ಯ ನಿರ್ವಹಿಸಿದ್ದರು. ನಾಝಿಗಳಿಗೆ ಸಿಕ್ಕಿಬಿದ್ದ ಬಳಿಕ ಚಿತ್ರಹಿಂಸೆಗೆ ಗುರಿಯಾದರೂ, ಯಾವುದೇ ಮಾಹಿತಿಯನ್ನು ಬಾಯ್ಬಿಡಲಿಲ್ಲ. 1944ರಲ್ಲಿ ಡಚಾವು ಎಂಬಲ್ಲಿ ಬಂಧನಾ ಕೇಂದ್ರದಲ್ಲಿ ನೂರ್ ಕೊನೆಯುಸಿರೆಳೆದರು. ಇವರಿಗೆ ಫ್ರಾನ್ಸ್ ಸರಕಾರ ಸ್ವರ್ಣ ನಕ್ಷತ್ರವನ್ನು ಒಳಗೊಂಡ ಕ್ರಾಕ್ಸ್ ಡಿ ಗೇರ್ ಪ್ರಶಸ್ತಿಯನ್ನು, ಬ್ರಿಟನ್ ಸರಕಾರ, ಯುದ್ಧರಂಗ ಹೊರತುಪಡಿಸಿ ಸಾಧನೆಗೈದವರಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಜಾರ್ಜ್ ಕ್ರಾಸ್ ಗೌರವವನ್ನು ಮರಣೋತ್ತರವಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News