ಆಗಸ್ಟ್‌ನಲ್ಲಿ ಕಳೆದ 44 ವರ್ಷಗಳಲ್ಲಿಯೇ ಅತ್ಯಧಿಕ ಮಳೆ: ಹವಾಮಾನ ಇಲಾಖೆ

Update: 2020-08-29 14:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ನ.29: ಕಳೆದ 44 ವರ್ಷಗಳಲ್ಲಿ ದೇಶದಲ್ಲಿ ಈ ಆಗಸ್ಟ್ ತಿಂಗಳಲ್ಲಿ ಅತ್ಯಧಿಕ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಶನಿವಾರ ತಿಳಿಸಿದೆ. ಆ.28ರವರೆಗೆ ಶೇ.25ರಷ್ಟು ಹೆಚ್ಚುವರಿ ಮಳೆಯಾಗಿದ್ದನ್ನು ಇಲಾಖೆಯು ದಾಖಲಿಸಿದೆ.

ಈ ತಿಂಗಳು ಸುರಿದಿರುವ ಮಳೆಯ ಪ್ರಮಾಣವು 1983,ಆಗಸ್ಟ್‌ನಲ್ಲಿ ಇಡೀ ತಿಂಗಳಿಗೆ ಶೇ.23.8ರಷ್ಟು ಹೆಚ್ಚುವರಿ ಮಳೆಯಾಗಿದ್ದನ್ನು ಮೀರಿಸಿದೆ. 1976 ಆಗಸ್ಟ್‌ನಲ್ಲಿ ಇಡೀ ತಿಂಗಳಿಗೆ ಶೇ.28.4ರಷ್ಟು ಹೆಚ್ಚುವರಿ ಮಳೆಯಾಗಿತ್ತು ಎಂದು ಇಲಾಖೆಯು ತಿಳಿಸಿದೆ.

 ಪ್ರಸಕ್ತ ಋತುವಿನಲ್ಲಿ ಬಿಹಾರ,ಆಂಧ್ರಪ್ರದೇಶ,ತೆಲಂಗಾಣ,ತಮಿಳುನಾಡು,ಗುಜರಾತ್ ಮತ್ತು ಗೋವಾಗಳಲ್ಲಿ ಹೆಚ್ಚುವರಿ ಮಳೆಯಾಗಿದ್ದರೆ ಸಿಕ್ಕಿಮ್‌ನಲ್ಲಿ ಅತಿಯಾದ ಮಳೆ ಸುರಿದಿದೆ. ಅಸ್ಸಾಂ,ಬಿಹಾರ ಮತ್ತು ಒಡಿಶಾದಂತಹ ಕೆಲವು ರಾಜ್ಯಗಳಲ್ಲಿ ನೆರೆಯೂ ಉಂಟಾಗಿದೆ. ಇದೇ ವೇಳೆ ಜಮ್ಮು-ಕಾಶ್ಮೀರ, ಮಣಿಪುರ, ಮಿಝೋರಾಂ ಮತ್ತು ನಾಗಾಲ್ಯಾಂಡ್ ‌ಗಳಲ್ಲಿ ಮಳೆ ಕೊರತೆಯಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ ಪ್ರಸಕ್ತ ಮಳೆಗಾಲದಲ್ಲಿ ಸಾಮಾನ್ಯಕ್ಕಿಂತ ಶೇ.9ರಷ್ಟು ಹೆಚ್ಚು ಮಳೆಯಾಗಿದೆ. ಜೂನ್‌ನಲ್ಲಿ ಶೇ.17ರಷ್ಟು ಹೆಚ್ಚುವರಿ ಮಳೆಯಾಗಿದ್ದರೆ,ಜುಲೈನಲ್ಲಿ ಸಾಮಾನ್ಯಕ್ಕಿಂತ ಶೇ.10ರಷ್ಟು ಕಡಿಮೆ ಮಳೆಯಾಗಿತ್ತು ಎಂದು ಇಲಾಖೆಯು ಹೇಳಿದೆ.

ತನ್ಮಧ್ಯೆ ಕೇಂದ್ರ ಜಲ ಆಯೋಗವು ಆ.27ರವರೆಗೆ ದೇಶದಲ್ಲಿಯ ಜಲಾಶಯಗಳ ಸ್ಥಿತಿಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉತ್ತಮವಾಗಿದೆ. ಅದು ಹತ್ತು ವರ್ಷಗಳ ಸದ್ರಿ ಅವಧಿಯ ಸರಾಸರಿಗಿಂತಲೂ ಉತ್ತಮವಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News