15 ದಿನಗಳಲ್ಲಿ 12 ಬಾರಿ ಪೆಟ್ರೋಲ್ ದರ ಏರಿಸಿದ ಕೇಂದ್ರ ಸರಕಾರ

Update: 2020-08-30 06:49 GMT

ಹೊಸದಿಲ್ಲಿ, ಆ.30: ಜೂನ್ ಹಾಗೂ ಜುಲೈ ತಿಂಗಳಲ್ಲಿ ನಿರಂತರವಾಗಿ ಇಂಧನ ಬೆಲೆ ಏರಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈಗ ಮತ್ತೆ ಅದೇ ಚಾಳಿ ಮುಂದುವರಿಸಿದೆ. ಇದರ ಪರಿಣಾಮ ಕಳೆದ 15 ದಿನಗಳಲ್ಲಿ 12 ಬಾರಿ ಪೆಟ್ರೋಲ್ ದರ ಏರಿಕೆ ಮಾಡಲಾಗಿದೆ.

ಆಗಸ್ಟ್ 16ರಿಂದ ಪೆಟ್ರೋಲ್ ದರ ಏರಿಕೆ ಆರಂಭವಾಗಿದೆ. ಆಗಸ್ಟ್ 19, 26 ಹಾಗೂ 29 ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಪೆಟ್ರೋಲ್ ದರ ಏರಿಸಲಾಗಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 9 ಪೈಸೆ ಹೆಚ್ಚಳ ಮಾಡಲಾಗಿದೆ.  ಸರಕಾರಿ ತೈಲ ಕಂಪೆನಿಗಳು ಆಗಸ್ಟ್ 16ರಿಂದ ಈ ವರೆಗೆ ಒಟ್ಟು 15 ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 1.60 ರೂಪಾಯಿಯನ್ನು ಏರಿಕೆ ಮಾಡಿದಂತಾಗಿದೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ಮಹಾಕ್ರೂರಿ ಕೊರೋನ ಲಾಕ್ಡೌನ್ ಕಾರಣದಿಂದಾಗಿ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ಹಾಗೂ ಕಾಂಗ್ರೆಸ್ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನಮಂತ್ರಿ ಮೋದಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್ ದರ ಏರಿಸುತ್ತಲೇ ಇದೆ.

ರವಿವಾರ ಪೆಟ್ರೋಲ್ ಬೆಲೆ 0.09 ಪೈಸೆ ಹೆಚ್ಚಳವಾಗುವುದರೊಂದಿಗೆ ದಿಲ್ಲಿಯಲ್ಲಿ ಪೆಟ್ರೋಲ್ ದರ 82 ರೂ.ಗಡಿ ದಾಟಿದ್ದು, 82.03 ರೂ.ಗೆ ತಲುಪಿದೆ. ಇತ್ತೀಚೆಗಿನ ವಾರಗಳಲ್ಲಿ ಇತರ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಹೊಸ ಎತ್ತರಕ್ಕೆ ತಲುಪಿದೆ.ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ ರೂ.88.68 ಏರಿಕೆಯಾಗಿದ್ದು, ಆಗಸ್ಟ್ 16ರಿಂದ 1.40 ಪೈಸೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 82 ರೂ.ಹಾಗೂ ಕೋಲ್ಕತಾದಲಿ 83.52 ರೂ. ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News