ಜಮ್ಮು: ಪಾಕ್ ಸೇನೆಯ ಗುಂಡಿನ ದಾಳಿಗೆ ಸೇನಾಧಿಕಾರಿ ಹುತಾತ್ಮ

Update: 2020-08-30 18:44 GMT

ಜಮ್ಮು, ಆ.30: ಜಮ್ಮು -ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನದ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತದ ಸೇನಾಧಿಕಾರಿ ಬಲಿಯಾಗಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಗುಂಡಿನ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಸೇನೆಯ ಜ್ಯೂನಿಯರ್ ಕಮಿಷನ್ಡ್ ಆಫೀಸರ್(ಜೆಸಿಒ) ರಜ್ವೀಂದರ್ ಸಿಂಗ್ ಬಳಿಕ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ . ಅವರ ಮೃತದೇಹದ ಅಂತ್ಯಸಂಸ್ಕಾರ ಹುಟ್ಟೂರು ಅಮೃತಸರದಲ್ಲಿ ಸೋಮವಾರ ನಡೆಯಲಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ವರದಿಯಾಗಿದೆ.

ನೌಶೇರಾ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಕೆಲವು ವ್ಯಕ್ತಿಗಳ ಶಂಕಾಸ್ಪದ ಚಲನವಲನವನ್ನು ಗಮನಿಸಿದ ಭಾರತೀಯ ಸೇನೆ ಮುಂಚೂಣಿ ನೆಲೆಗೆ ಎಚ್ಚರಿಕೆ ಸಂದೇಶ ಕಳುಹಿಸಿ ಗಸ್ತು ಪ್ರಕ್ರಿಯೆಯನ್ನು ತೀವ್ರಗೊಳಿಸಿತು. ಆಗ ಪಾಕಿಸ್ತಾನದ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದ್ದು ಭಾರತದ ಸೇನೆಯೂ ಸೂಕ್ತ ಪ್ರತ್ಯುತ್ತರ ನೀಡಿದೆ . ಪಾಕ್ ಕಡೆಯಲ್ಲೂ ಸಾವು ನೋವುಗಳಾಗಿವೆ ಎಂದು ವಕ್ತಾರರು ಹೇಳಿದ್ದಾರೆ.

ಗಡಿ ಭಾಗದಲ್ಲಿ ಭಾರತದೊಳಗೆ ನುಸುಳುವ ಉಗ್ರರಿಗೆ ರಕ್ಷಣೆ ನೀಡಲು ಸಾಮಾನ್ಯವಾಗಿ ಪಾಕಿಸ್ತಾನಿ ಪಡೆ ಈ ರೀತಿಯ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News