ಬಿಜಿಆರ್‌ಟಿಗೆ ಸಿಐಐ ರಾಷ್ಟ್ರೀಯ ಪುರಸ್ಕಾರ
ಬೆಂಗಳೂರು, ಆ.31: ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಬ್ಯಾರೀಸ್ ಗ್ರೂಪ್ ನ ವಿಶಿಷ್ಟ ಯೋಜನೆ ಬೆಂಗಳೂರಿನ ‘ಬ್ಯಾರೀಸ್ ಗ್ಲೋಬಲ್ ರಿಸರ್ಚ್ ಟ್ರಯಾಂಗಲ್’ (ಬಿಜಿಆರ್‌ಟಿ) ಕಾನ್ಫಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ನೀಡುವ ಪ್ರತಿಷ್ಠಿತ ‘ರಾಷ್ಟ್ರೀಯ ಅತ್ಯುತ್ತಮ ಇಂಧನ ದಕ್ಷ ನಿರ್ಮಾಣ ಪ್ರಶಸ್ತಿ’ (ನ್ಯಾಶನಲ್ ಎಕ್ಸಲೆಂಟ್ ಎನರ್ಜಿ ಎಫೀಸಿಯಂಟ್ ಬಿಲ್ಡಿಂಗ್ ಅವಾರ್ಡ್) ಗೆ ಪಾತ್ರವಾಗಿದೆ.
ಇತ್ತೀಚೆಗೆ ನಡೆದ ಇಂಧನ ನಿರ್ವಹಣೆ ಸಮ್ಮೇಳನ-2020ರಲ್ಲಿ ಸಿಐಐ ಈ ಪ್ರಶಸ್ತಿಯನ್ನು ಬಿಜಿಆರ್‌ಟಿಗೆ ಪ್ರದಾನ ಮಾಡಿದೆ.
ಬಿಜಿಆರ್‌ಟಿ ಪರಿಸರ ಸ್ನೇಹಿ ನಿರ್ಮಾಣ ಕ್ಷೇತ್ರದಲ್ಲಿ ದೇಶದಲ್ಲೇ ಅತ್ಯಂತ ಅಸಾಮಾನ್ಯ ಯೋಜನೆಗಳಲ್ಲಿ ಒಂದೆಂದು ಈಗಾಗಲೇ ಹಲವು ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿದೆ. ತಡೆರಹಿತ ಸಂಪರ್ಕ, ಸೃಜನಶೀಲ ಕಾರ್ಯಸ್ಥಳ ಮತ್ತು ಸಮಕಾಲೀನ ವ್ಯವಹಾರ ಜೀವನಶೈಲಿಯನ್ನು ನೀಡುವ ಯೋಜನೆ ಎಂಬ ಮನ್ನಣೆಗೆ ಅದು ಪಾತ್ರವಾಗಿದೆ. ಅತ್ಯುತ್ತಮ ವಿನ್ಯಾಸ, ಸ್ಥಳಾವಕಾಶದ ಅತ್ಯುತ್ತಮ ಬಳಕೆ, ಸಂಪನ್ಮೂಲದ ರಕ್ಷಣೆ, ಅತ್ಯಾಧುನಿಕ ತಂತ್ರಜ್ಞಾನದ ಸೂಕ್ತ ಬಳಕೆ ಹಾಗೂ ಉತ್ಕೃಷ್ಟ ಆರ್ಕಿಟೆಕ್ಚರ್ ಗಾಗಿ ಬಿಜಿಆರ್‌ಟಿಯನ್ನು ಉದ್ಯಮ ಮತ್ತು ನಿರ್ಮಾಣ ಕ್ಷೇತ್ರದ ಶೈಕ್ಷಣಿಕ ವಲಯ ಗುರುತಿಸಿ ಶ್ಲಾಘಿಸಿದೆ.
“ಈ ಗೌರವವನ್ನು ನಮ್ಮ ಶ್ರೇಷ್ಠ ನಾಯಕ, ಐಜಿಬಿಸಿಯ ಮಾಜಿ ಅಧ್ಯಕ್ಷ ದಿವಂಗತ ಡಾ.ಪ್ರೇಮ್ ಸಿ. ಜೈನ್‌ರಿಗೆ ಸಮರ್ಪಿಸುತ್ತಿದ್ದೇವೆ. ನಮ್ಮ ಸಾಧನೆಗೆ ಅವರು ನೀಡಿದ ಸಲಹೆ, ಮಾರ್ಗದರ್ಶನ ಮತ್ತು ನೆರವು ಕಾರಣವಾಗಿದ್ದು, ಇದೇ ಉತ್ಕೃಷ್ಟತೆಯನ್ನು ಕಾಯ್ದುಕೊಂಡು ಮತ್ತಷ್ಟು ಹೆಚ್ಚಿನ ಸಾಧನೆಯತ್ತ, ಭಾರತದ ಪರಿಸರ ಸ್ನೇಹಿ ನಿರ್ಮಾಣ (ಗ್ರೀನ್ ಬಿಲ್ಡಿಂಗ್) ಅಭಿಯಾನದ ಮುಂಚೂಣಿ ಸಂಸ್ಥೆಯಾಗಿ ನಮ್ಮ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ” ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.