ಮಾದಕ ವಸ್ತು ಸೇವಿಸಿ ಪೊಲೀಸರ ಮೇಲೆ ಹಲ್ಲೆ ಆರೋಪ: ಇಬ್ಬರು ವಶ
Update: 2020-08-31 18:15 IST
ಬೆಂಗಳೂರು, ಆ.31: ಮಾದಕ ವಸ್ತು ಗಾಂಜಾ ಸೇವಿಸಿ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಸವಾರರನ್ನು ಹಿಡಿಯಲು ತೆರಳಿದ ಸಂಚಾರ ಪೊಲೀಸ್ ಪೇದೆ ಮೇಲೆಯೇ ಹಲ್ಲೆ ಮಾಡಿರುವ ಘಟನೆ ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ಮುಂಜಾನೆ ಬೈಕ್‍ನಲ್ಲಿ ಮೂವರು ಸವಾರರು ತೆರಳುತ್ತಿದ್ದಾಗ ಪೊಲೀಸ್ ಪೇದೆ ವಿದ್ಯಾದರ್ ಅಡ್ಡಗಟ್ಟಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಕಾಲಿನಿಂದ ಒದ್ದು ಪರಾರಿಯಾಗಲು ಪ್ರಯತ್ನಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಆರೋಪಿಗಳಾದ ಅಮರ್ ಖುರೇಶಿ, ಸಾದಿಕ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು, ವಿಜಯನಗರ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.