ನನ್ನ ಕುಟುಂಬದವರ ಮೇಲೆ ದಾಳಿ ಮಾಡಿದವರನ್ನು ಬಿಡಬೇಡಿ:ಪಂಜಾಬ್ ಸಿಎಂಗೆ ಸುರೇಶ್ ರೈನಾ ಆಗ್ರಹ

Update: 2020-09-01 09:41 GMT

ಹೊಸದಿಲ್ಲಿ,ಸೆ.1:ಪಂಜಾಬ್‌ನಲ್ಲಿ ತನ್ನ ಕುಟುಂಬ ಸದಸ್ಯರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಮಾರಣಾಂತಿಕ ಹಲ್ಲೆಗೈದ ಹಲವು ದಿನಗಳ ಬಳಿಕ ಪ್ರತಿಕ್ರಿಯಿಸಿರುವ ಕ್ರಿಕೆಟಿಗ ಸುರೇಶ್ ರೈನಾ, "ಈ ತನಕ ಆ ರಾತ್ರಿ ಏನು ನಡೆಯಿತು ಎಂದು ನನಗೆ ಗೊತ್ತಿಲ್ಲ. ಇದನ್ನು ಯಾರು ಮಾಡಿದರೆಂದೂ ಗೊತ್ತಾಗಿಲ್ಲ. ಪಂಜಾಬ್‌ನಲ್ಲಿ ನನ್ನ ಕುಟುಂಬದ ಮೇಲೆ ಏನಾಯಿತು ಎನ್ನುವುದೇ ಅತ್ಯಂತ ಭಯಾನಕವಾಗಿದೆ. ನನ್ನ ಚಿಕ್ಕಪ್ಪನನ್ನು ಹತ್ಯೆಗೈಯಲಾಯಿತು. ನನ್ನ ಚಿಕ್ಕಮ್ಮ ಹಾಗೂ ಇಬ್ಬರು ಸೋದರ ಸಂಬಂಧಿಗಳಿಗೆ ತೀವ್ರ ಗಾಯಗಳಾಗಿವೆ. ಜೀವನ್ಮರಣ ಹೋರಾಟದ ಬಳಿಕ ನನ್ನ ಸಹೋದರ ಸಂಬಂಧಿ ಕಳೆದ ರಾತ್ರಿ ನಿಧನರಾಗಿದ್ದಾರೆ. ನನ್ನ ಚಿಕ್ಕಮ್ಮ ಈಗಲೂ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದು, ಜೀವರಕ್ಷಕ ವ್ಯವಸ್ಥೆಯಲ್ಲಿದ್ದಾರೆ''ಎಂದು ರೈನಾ ಟ್ವೀಟ್ ಮಾಡಿದ್ದಾರೆ.

 ತನ್ನ ಟ್ವೀಟನ್ನು ಪಂಜಾಬ್ ಮುಖ್ಯಮಂತ್ರಿ ಕಾಪ್ಟನ್ ಅಮರಿಂದರ್ ಸಿಂಗ್‌ಗೆ ಟ್ಯಾಗ್ ಮಾಡಿ "ಇಂತಹ ಅಪರಾಧದಲ್ಲಿ ಭಾಗಿಯಾದವರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಈ ವಿಚಾರದತ್ತ ಹೆಚ್ಚು ಕಾಳಜಿ ವಹಿಸುವಂತೆ ಪಂಜಾಬ್ ಪೊಲೀಸರಲ್ಲಿ ವಿನಂತಿಸುವೆ'' ಎಂದು ಒತ್ತಾಯಿಸಿದ್ದಾರೆ.

ಆಗಸ್ಟ್ 20ರಂದು ಮೂರ್ನಾಲ್ಕು ಸದಸ್ಯರಿದ್ದ ಸ್ಥಳೀಯ ಗ್ಯಾಂಗ್ ಪಠಾಣ್‌ಕೋಟ್‌ನಲ್ಲಿ ನೆಲೆಸಿದ್ದ ರೈನಾರ ಕುಟುಂಬ ಸದಸ್ಯರ ಮೇಲೆ ಮಲಗಿದ್ದಾಗಲೇ ಮಾರಣಾಂತಿಕ ದಾಳಿ ನಡೆಸಿದೆ. ರೈನಾರ 58ರ ವಯಸ್ಸಿನ ಚಿಕ್ಕಪ್ಪ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದರು. ಕುಟುಂಬದ ಇತರ ನಾಲ್ವರಿಗೆ ಗಂಭೀರ ಗಾಯವಾಗಿತ್ತು.

ವಿಷಯ ತಿಳಿದ ರೈನಾ ಯುಎಇನಿಂದ ಭಾರತಕ್ಕೆ ಆಗಮಿಸಿದ್ದಾರೆ. ವೈಯಕ್ತಿಕ ಕಾರಣದಿಂದ ರೈನಾ ಐಪಿಎಲ್ ತೊರೆದಿದ್ದರು ಎಂದು ಚೆನ್ನೈ ಟೀಮ್‌ನ ಸಿಇಒ ವಿಶ್ವನಾಥನ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News