ದೇಶದಲ್ಲಿ 8 ಲಕ್ಷಕ್ಕೇರಿದ ಸಕ್ರಿಯ ಕೊರೋನ ಪ್ರಕರಣ

Update: 2020-09-02 03:40 GMT

ಹೊಸದಿಲ್ಲಿ, ಸೆ.2: ದೇಶದಲ್ಲಿ ಮಂಗಳವಾರ ಮತ್ತೆ 80 ಸಾವಿರಕ್ಕೂ ಅಧಿಕ ಕೊರೋನ ಪ್ರಕರಣಗಳು ಸೇರ್ಪಡೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಎಂಟು ಲಕ್ಷದ ಗಡಿ ದಾಟಿದೆ. ಮೂರು ದಿನಗಳ ಬಳಿಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಸಾವಿರದ ಗಡಿ ದಾಟಿದೆ.

ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ ತಿಂಗಳ ಮೊದಲ ದಿನ ದೇಶದಲ್ಲಿ 80,024 ಪ್ರಕರಣಗಳು ಪತ್ತೆಯಾಗಿದ್ದು, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 37,62,063ಕ್ಕೇರಿದೆ. ಮಂಗಳವಾರ ಒಂದೇ ದಿನ 1,021 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಹನ್ನೊಂದು ದಿನಗಳಲ್ಲಿ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಳವಾಗಿದೆ. ಈ ಪ್ರಮಾಣ 6ರಿಂದ 7 ಲಕ್ಷಕ್ಕೆ ಹೆಚ್ಚಲು 15 ದಿನ ತೆಗೆದುಕೊಂಡಿತ್ತು. ಕಳೆದ ವಾರ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸಕ್ರಿಯ ಪ್ರಕರಣಗಳ ಹೆಚ್ಚಳಕ್ಕೆ ಕಾರಣ. ವಿಶ್ವದಲ್ಲಿ ಅಮೆರಿಕವನ್ನು ಹೊರತುಪಡಿಸಿ ಗರಿಷ್ಠ ಸಂಖ್ಯೆಯ ಸಕ್ರಿಯ ಪ್ರಕರಣಗಳಿರುವ ದೇಶವಾಗಿ ಭಾರತ ಹೊರಹೊಮ್ಮಿದೆ.

ಮಹಾರಾಷ್ಟ್ರದಲ್ಲಿ ಮಂಗಳವಾರ 15,765 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಎಂಟು ಲಕ್ಷದ ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ದೇಶದಲ್ಲೇ ಅತ್ಯಧಿಕ ಹಾಗೂ ವಿಶ್ವದಲ್ಲಿ ಗರಿಷ್ಠ ಪ್ರಕರಣಗಳು ದಾಖಲಾದ ರಾಜ್ಯಗಳ ಪೈಕಿ ಮಹಾರಾಷ್ಟ್ರ ಐದನೇ ಸ್ಥಾನದಲ್ಲಿದೆ. 320 ಮಂದಿ ಹೊಸದಾಗಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 24,903ಕ್ಕೇರಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,98,523ರಷ್ಟಿದೆ.

ಸತತ ಏಳನೇ ದಿನ ಆಂಧ್ರ ಪ್ರದೇಶದಲ್ಲಿ 10 ಸಾವಿರಕ್ಕೂ ಅಧಿಕ (10,368) ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕದಲ್ಲಿ 9,058 ಪ್ರಕರಣಗಳು ದೃಢಪಟ್ಟಿವೆ. ಜಾರ್ಖಂಡ್ (3,331), ಛತ್ತೀಸ್‌ಗಢ (1,822), ಹರ್ಯಾಣ (1,694), ರಾಜಸ್ಥಾನ (1,470), ಗುಜರಾತ್ (1,310), ಗೋವಾ (588), ತ್ರಿಪುರಾ (509) ಮಂಗಳವಾರ ಈವರೆಗಿನ ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News