ದೇಶದಲ್ಲಿ ಅಪಘಾತದಿಂದ ಪ್ರತಿ ಗಂಟೆಗೆ ಮೃತಪಡುತ್ತಿರುವವರೆಷ್ಟು ಗೊತ್ತೇ?

Update: 2020-09-02 04:23 GMT

ಹೊಸದಿಲ್ಲಿ, ಸೆ.2: ಭಾರತದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಪ್ರತಿ ಗಂಟೆಗೆ 48 ಮಂದಿ ಸಾಯುತ್ತಿದ್ದಾರೆ ಎನ್ನುವುದು ಎನ್‌ಸಿಆರ್‌ಬಿ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

ಒಟ್ಟು ಅವಘಡಗಳಲ್ಲಿ ರಸ್ತೆ ಅಪಘಾತಗಳು, ರೈಲು ಅಪಘಾತಗಳ ಪಾಲು ಶೇಕಡ 44ರಷ್ಟಿದ್ದು, ಒಟ್ಟು 4.1 ಲಕ್ಷ ಮಂದಿ 2019ರಲ್ಲಿ ಅಪಘಾತಗಳಿಗೆ ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಹೇಳಿದೆ. ಇದರಲ್ಲಿ ಪ್ರವಾಹ, ಹಿಮಪಾತ ಹಾಗೂ ಉಷ್ಣಗಾಳಿಯ ಹೊಡೆತದಿಂದ ಮೃತಪಟ್ಟವರ ಸಂಖ್ಯೆ ಸೇರಿಲ್ಲ. 2018ರಲ್ಲಿ ಸಂಭವಿಸಿದ ಸಾವಿಗಿಂತ ಈ ಪ್ರಮಾಣ ಅಧಿಕ.

ಒಟ್ಟು ಅಪಘಾತಗಳ ಪೈಕಿ ಶೇಕಡ 60ರಷ್ಟು ವೇಗದ ಚಾಲನೆ ಕಾರಣದಿಂದ ನಡೆದಿವೆ. ವೇಗದ ಚಾಲನೆಯಿಂದ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 86,241 ಮಂದಿ ಜೀವ ಕಳೆದುಕೊಂಡಿದ್ದು, ಅಪಾಯಕಾರಿ, ನಿರ್ಲಕ್ಷ್ಯದ ಚಾಲನೆ ಮತ್ತು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ 42,557 ಮಂದಿ ಬಲಿಯಾಗಿದ್ದಾರೆ.

ಇನ್ನೊಂದು ಗಮನಾರ್ಹ ವಿಚಾರವೆಂದರೆ, ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 28 ಸಾವಿರ ಆಗಿದೆ. 2018ರಲ್ಲಿ ಒಟ್ಟು 23,900 ಮಂದಿ ಹೃದಯಾಘಾತದಿಂದ ಕೊನೆಯುಸಿರೆದ್ದರು. ಒಂದು ವರ್ಷದಲ್ಲಿ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ರಸ್ತೆ ಅಪಘಾತಗಳಲ್ಲಿ ಒಟ್ಟು 1.8 ಲಕ್ಷ ಮಂದಿ ಮೃತಪಟ್ಟಿದ್ದು, ಈ ಪೈಕಿ ಸಂಚಾರ ದಟ್ಟಣೆಯಲ್ಲಿ ಸಂಭವಿಸಿದ ಅಪಘಾತದಿಂದ ಮಡಿದವರು 1.6 ಲಕ್ಷ ಮಂದಿ. 2018ರಲ್ಲಿ 1.5 ಲಕ್ಷ ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದರು. ಅಂತೆಯೇ 28 ಸಾವಿರ ರೈಲು ಸಂಬಂಧಿತ ಅಪಘಾತಗಳು 24,619 ಮಂದಿಯ ಜೀವ ಬಲಿ ಪಡೆದಿದ್ದು, 1,762 ಮಂದಿ ರಳ್ವೆ ಕ್ರಾಸಿಂಗ್‌ಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಒಟ್ಟು ವರದಿಯಾದ 4.2 ಲಕ್ಷ ಅಪಘಾತ ಸಾವುಗಳ ಪೈಕಿ 8,145 ಸಾವುಗಳು ಪ್ರಕೃತಿ ವಿಕೋಪಗಳಿಂದ ಆಗಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ (70,329) ಸಾವು ಸಂಭವಿಸಿದ್ದು, ಮಧ್ಯಪ್ರದೇಶ (42,431) ಮತ್ತು ಉತ್ತರ ಪ್ರದೇಶ (40,596) ನಂತರದ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News