ಇನ್ನು ಕೊರೋನ ಸೋಂಕಿತರ ಮನೆ ಮುಂದೆ ಭಿತ್ತಿಪತ್ರ ಅಂಟಿಸದಿರಲು ಬಿಬಿಎಂಪಿ ನಿರ್ಧಾರ
ಬೆಂಗಳೂರು, ಸೆ.2: ನಗರದಲ್ಲಿ ಕೊರೋನ ಸೋಂಕಿತರು ಹೆಚ್ಚು ಮಂದಿ ಹೋಮ್ ಐಸೋಲೇಷನ್‍ನಲ್ಲಿ ಇರುವ ಪರಿಣಾಮ ಕಡಿಮೆ ಜನಸಂಖ್ಯೆಯಿರುವ ಕೆಲ ಕೋವಿಡ್ ಆರೈಕೆ ಕೇಂದ್ರ ಮುಚ್ಚಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೊರೋನ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಕೊರೋನ ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡಲು 12 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸೋಂಕು ದೃಢಪಟ್ಟವರು ಹೋಮ್ ಐಸೋಲೇಷನ್‍ನಲ್ಲಿರಲು ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.
ಹೋಮ್ ಐಸೋಲೇಷನ್‍ನಲ್ಲಿ ಇರಲು ಇಚ್ಛಿಸುವವರು ಅವರ ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆಯೇ ಎಂಬುದನ್ನು ಪಾಲಿಕೆಯ ತಂಡ ಪರಿಶೀಲಿಸಲಿದೆ. ಅಲ್ಲದೆ ಕುಶಾಲ ಪೋರ್ಟನ್‍ನಲ್ಲಿ ನಮೂದಿಸಿ ಸ್ವಸ್ಥ್ ಸಂಸ್ಥೆಯಿಂದ ಅಗತ್ಯ ಸೌಲಭ್ಯಗಳು ಹಾಗೂ ನಿಗಾ ವಹಿಸಲಾಗುತ್ತಿದೆ. ಹೆಚ್ಚು ಮಂದಿ ಹೋಮ್ ಐಸೋಲೇಷನ್‍ನಲ್ಲಿ ಇರುವ ಪರಿಣಾಮ ಕಡಿಮೆ ಜನಸಂಖ್ಯೆಯಿರುವ ಕೋವಿಡ್ ಆರೈಕೆ ಕೇಂದ್ರ ಮುಚ್ಚಲಾಗುವುದು. ಸೋಂಕು ಪ್ರಕರಣಗಳು ಹೆಚ್ಚಾದಲ್ಲಿ ಅವಶ್ಯಕತೆ ಇದ್ದರೆ ಮತ್ತೆ ತೆರೆಯಲಾಗುವುದು ಎಂದರು.
ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ 6,500 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಿ 1,500 ಮಂದಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಇನ್ನು 1,500 ಹಾಸಿಗೆ ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಮೀಸಲಿಡಲಾಗಿದೆ. ಉಳಿದ 3,500 ಹಾಸಿಗೆಗಳನ್ನು ಈಗಾಗಲೇ ಖರೀದಿಸಲಾಗಿದೆ. ಅದನ್ನು ಆಸ್ಪತ್ರೆ, ಹಾಸ್ಟೆಲ್‍ಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಜೊತೆಗೆ ಬಾಡಿಗೆ ಹಿಂತಿರುಗಿಸಲಾಗುವುದು ಎಂದರು.
ದಿನಕ್ಕೆ 30 ಸಾವಿರ ಕೊರೋನ ಪರೀಕ್ಷೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ನಿರ್ವಹಣೆಯಲ್ಲಿ ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದು, ಪ್ರತಿನಿತ್ಯ ಹೆಚ್ಚು-ಹೆಚ್ಚು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜುಲೈ ತಿಂಗಳಲ್ಲಿ ದಿನಕ್ಕೆ 3 ಸಾವಿರ ಪರೀಕ್ಷೆ ಮಾಡಲಾಗುತ್ತಿತ್ತು. ಇದೀಗ ದಿನಕ್ಕೆ 30 ಸಾವಿರ ಪರೀಕ್ಷೆ ಮಾಡಲಾಗುತ್ತಿದ್ದು, ಪಾಸಿಟಿವಿಟಿ ರೇಟ್ ಶೇ.10 ರಷ್ಟಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
19 ಆಸ್ಪತ್ರೆಯಲ್ಲಿ ಹೆಚ್ಚಿನ ಕೊರೋನ ಸೋಂಕಿತರು ಮೃತ್ಯು
ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಮೃತರಾಗುತ್ತಿರುವ 19 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಈ 19 ಆಸ್ಪತ್ರೆಗಳಲ್ಲಿ ಪಾಲಿಕೆ ವತಿಯಿಂದ 24,368 ಮಂದಿ ದಾಖಲಾಗಿದ್ದು, 1,598 ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಒಂದು ತಂಡವನ್ನು ರಚನೆ ಮಾಡಿದ್ದು, ಪ್ರತಿಯೊಂದು ಆಸ್ಪತ್ರೆಗೆ ತಂಡವು ಭೇಟಿ ನೀಡಿ ಯಾವ ಕಾರಣಕ್ಕೆ ಹೆಚ್ಚು ಸಾವಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಇದರಿಂದ ಸಾವಿನ ಸಂಖ್ಯೆ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದರು.
ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಸೋಂಕು ದೃಢಪಟ್ಟವರ ಮನೆಗಳ ಮುಂದೆ ಭಿತ್ತಿಪತ್ರ(ಪೋಸ್ಟರ್) ಅಂಟಿಸಲಾಗುತ್ತಿತ್ತು. ಇದೀಗ ಪೋಸ್ಟರ್ ಗಳನ್ನು ಅಂಟಿಸದೆ ಸುತ್ತ-ಮುತ್ತಲಿನ ಮನೆಯವರಿಗೆ ಸೋಂಕು ದೃಢಪಟ್ಟುರುವವರ ಬಗ್ಗೆ ಮಾಹಿತಿ ನೀಡಲಾಗುವುದು. ಸೋಂಕು ದೃಢಪಟ್ಟ ಮನೆಗಳ ಮುಂದೆ ಭಿತ್ತಿಪತ್ರ ಅಂಟಿಸುವುದು ಮತ್ತು ಬ್ಯಾರಿಕೇಡ್ ಅಳವಡಿಸುವುದರಿಂದ ಸುತ್ತ-ಮುತ್ತಲಿನ ಜನ ಭಯಪಡುವುದು ಹಾಗೂ ಸೋಂಕು ದೃಢಪಟ್ಟವರ ಮನೆಯವರನ್ನು ಕೆಟ್ಟ ದಷ್ಟಿಯಲ್ಲಿ ನೋಡುವ ಪರಿಸ್ಥಿತಿ ಇತ್ತು. ಆದ್ದರಿಂದ ಭಿತ್ತಿಪತ್ರ ಅಂಟಿಸುವುದನ್ನು ನಿಲ್ಲಿಸಲಾಗುವುದು.
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ