ಕೋವಿಡ್ ಭಯದಿಂದ ಐದು ತಿಂಗಳು ಹೆತ್ತವರಿಂದಲೇ ದಿಗ್ಬಂಧನಕ್ಕೊಳಗಾದ ಮಕ್ಕಳು

Update: 2020-09-03 10:54 GMT

ಸ್ಟಾಕ್‍ಹೋಂ: ಕೊರೋನವೈರಸ್ ಸೋಂಕು ತಗಲುವ ಭೀತಿಯಿಂದ ಸರಿಸುಮಾರು ಐದು ತಿಂಗಳುಗಳ ಕಾಲ ಹೆತ್ತವರಿಂದಲೇ ತಮ್ಮ ಮನೆಯಲ್ಲಿ  ದಿಗ್ಬಂಧನಕ್ಕೊಳಗಾಗಿದ್ದ ಮೂವರು ಮಕ್ಕಳನ್ನು ಮತ್ತೆ ಅವರ ಮನೆಗೆ ಮರಳಲು ಅನುಮತಿಸಬಾರದು ಎಂದು ಸ್ವೀಡನ್ ದೇಶದ ಆಡಳಿತಾತ್ಮಕ ನ್ಯಾಯಾಲಯ ತೀರ್ಪು ನೀಡಿದೆ.

ಮಾರ್ಚ್ ತಿಂಗಳಿನಿಂದ ಜುಲೈ ಆರಂಭದ ತನಕ 10ರಿಂದ 17 ವರ್ಷ ಪ್ರಾಯದ ಮೂವರು ಮಕ್ಕಳನ್ನು ಅವರ ಹೆತ್ತವರು ಮನೆಯಿಂದ ಹೊರ ಹೋಗಲು ಅನುಮತಿಸಿರಲಿಲ್ಲ. ಅಷ್ಟೇ ಅಲ್ಲದೆ ಅಪಾರ್ಟ್‍ಮೆಂಟ್ ಬಾಗಿಲನ್ನು ಮರದ ಹಲಗೆಯಿಂದ ಮುಚ್ಚಿ ಅದಕ್ಕೆ ಆಣಿ ಬಡಿದಿದ್ದರು. ಮೂವರು ಮಕ್ಕಳನ್ನೂ ಪ್ರತ್ಯೇಕ ಕೊಠಡಿಗಳಲ್ಲಿ ಹೆತ್ತವರು ಇರಿಸಿದ್ದರು ಎಂದು ಜೊನ್ಕೊಪಿಂಗ್ ಕೌಂಟಿಯ ಕೋರ್ಟ್ ತೀರ್ಪು ನೀಡುವ ವೇಳೆ ವಿವರಿಸಲಾಗಿದೆ.

ಆ ಕುಟುಂಬಕ್ಕೆ ಸ್ವೀಡಿಶ್ ಭಾಷೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ ಹಾಗೂ ಮಾತನಾಡಲೂ ಆಗುತ್ತಿರಲಿಲ್ಲ ಹಾಗೂ ಮಕ್ಕಳ ಹೆತ್ತವರು ಬೇರೆ ದೇಶದವರಾಗಿದ್ದರಿಂದ ಆ ದೇಶದ ಭಾಷೆಯಲ್ಲಿ ಅಲ್ಲಿ ವರದಿಯಾಗುತ್ತಿದ್ದ ಸುದ್ದಿಗಳನ್ನೇ ಕೇಳುತ್ತಿದ್ದರು. ಅವರ ಮೂಲ ದೇಶದಲ್ಲಿ ಸ್ವೀಡನ್‍ನಲ್ಲಿದ್ದುದಕ್ಕಿಂತ ಹೆಚ್ಚಿನ ನಿರ್ಬಂಧಗಳಿದ್ದವು ಎಂದು ಮಕ್ಕಳ ಪರ ವಾದಿಸಿದ್ದ ವಕೀಲ ಮೈಕೆಲ್ ಸ್ವೇಗ್ಫೊರ್ಸ್ ಹೇಳಿದ್ಧಾರೆ.

ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದರಿಂದ ನ್ಯಾಯಾಲಯ ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ತೀರ್ಪು ನೀಡಿದೆ.

ಆದರೆ ಮಕ್ಕಳ ಹೆತ್ತವರು ಮಾತ್ರ ತಾವೇನೂ ಮಕ್ಕಳಿಗೆ ಅವರ ಇಚ್ಛೆಗೆ ವಿರುದ್ಧವಾಗಿ ದಿಗ್ಬಂಧನ ವಿಧಿಸಿರಲಿಲ್ಲ, ಅವರಿಗೆ ಮನೆಯಲ್ಲಿಯೇ ಕಲಿಸಲಾಗುತ್ತಿತ್ತು ಹಾಗೂ  ಅವರು ಇಚ್ಛಿಸಿದರೆ ಹೊರ ಹೋಗಲು ಅವರು ಸ್ವತಂತ್ರರಾಗಿದ್ದರು ಎಂದಿದ್ದಾರೆಲ್ಲದೆ ಕೋರ್ಟ್ ತೀರ್ಪಿನ ವಿರುದ್ಧ  ಅಪೀಲು ಸಲ್ಲಿಸುವುದಾಗಿಯೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News