ರಾಜ್ಯದ ಪಾಲಿನ ಜಿಎಸ್‍ಟಿ ಪಾಲು ನೀಡದೆ ಕೇಂದ್ರ ಸರಕಾರದ ವಂಚನೆ: ಆಮ್ ಆದ್ಮಿ ಪಕ್ಷ ಆಕ್ರೋಶ

Update: 2020-09-03 14:51 GMT

ಬೆಂಗಳೂರು, ಸೆ.3: ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಯಿತು ಎಂದು ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ನೀವು ಹೈಕಮಾಂಡ್ ಸಂಸ್ಕೃತಿಯ ವಿರುದ್ಧ ತೊಡೆ ತಟ್ಟಿದವರು. ಕುರ್ಚಿ ಉಳಿಸಿಕೊಳ್ಳಲು ಆಗ ರಾಜೀನಾಮೆ ಎಸೆದಿರಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಸ್ಮರಿಸಿದ್ದಾರೆ,

ಆದರೆ, ಇಂದು ಇಡೀ ರಾಜ್ಯ ಸಂಕಷ್ಟದಲ್ಲಿದೆ ಕೇಂದ್ರ ಸರಕಾರವು ರಾಜ್ಯದ ಪಾಲಿಗೆ ಬರಬೇಕಿರುವ ಜಿಎಸ್‍ಟಿ ಪಾಲನ್ನು ಕೊಡದೇ ಮೋಸ ಮಾಡಿದೆ. ಈ ಅನ್ಯಾಯವನ್ನು ಪ್ರತಿಭಟಿಸದೆ ಕೇಂದ್ರದ ತಾಳಕ್ಕೆ ಕುಣಿಯುತ್ತಿರುವ ನಿಮಗೆ ಕೊಂಚವೂ ಸ್ವಾಭಿಮಾನ ಇಲ್ಲವೇ. ಈಗ ಸ್ವಾಭಿಮಾನ ಎನ್ನುವುದು ಕಿಂಚಿತ್ತಾದರೂ ಇದ್ದರೆ ರಾಜೀನಾಮೆ ನೀಡಿ ಇಡೀ ದೇಶಕ್ಕೆ ಮಾದರಿ ಆಗಿ ಎಂದು ಅವರು ಸವಾಲು ಹಾಕಿದ್ದಾರೆ.

ದಕ್ಷಿಣದ ಇತರೆ ರಾಜ್ಯಗಳು ಕೇಂದ್ರ ಸರಕಾರವೆ ಆರ್‍ಬಿಐನಿಂದ ಸಾಲ ಪಡೆದು ರಾಜ್ಯಗಳಿಗೆ ಹಂಚಲಿ ಎಂದು ತಾಕೀತು ಮಾಡಿವೆ, ಆದರೆ ತಾವು ಮಾತ್ರ ಸಾಲ ಮಾಡಲು ಹೊರಟಿದ್ದೀರಿ. ಅನ್ಯಾಯವನ್ನು ಪ್ರತಿಭಟಿಸಲಾಗದ ಅಸಹಾಯಕ ಸ್ಥಿತಿಗೆ ತಲುಪಿರುವ ನಿಮ್ಮ ಬಗ್ಗೆ ಆಮ್ ಆದ್ಮಿ ಪಕ್ಷ ಕನಿಕರ ವ್ಯಕ್ತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಯಡಿಯೂರಪ್ಪ, ಕರ್ನಾಟಕ ಇಷ್ಟೆಲ್ಲಾ ಸಂಕಷ್ಟದಲ್ಲಿ ಇದ್ದರೂ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಾಗದ ಸ್ಥಿತಿಗೆ ತಲುಪಿದ್ದಾರೆ. ಪ್ರಭಾವಿ ಸಚಿವರ ಹಿಡಿತಕ್ಕೆ ಸಿಲುಕಿರುವ ಅವರು ಪ್ರಭಾವಿಗಳ ಇಲಾಖೆಗಳಿಗೆ ಮಾಡಿರುವ ಹಣ ಮಂಜೂರಾತಿ ಸೇರಿದಂತೆ ಅನಗತ್ಯ ಕಾಮಗಾರಿಗಳನ್ನು ನಿಲ್ಲಿಸಿ ಅಗತ್ಯವಿರುವ ಕಡೆ ಮಾತ್ರ ಹಣಕಾಸನ್ನು ಬಳಸಬೇಕು ಎಂದು ಜಗದೀಶ್ ಒತ್ತಾಯಿಸಿದ್ದಾರೆ.

ಲಾಕ್‍ಡೌನ್ ಸಡಿಲ ಆದಾಗಿನಿಂದ ಬೆಂಗಳೂರು ನಗರ ಒಂದರಲ್ಲೇ ಉತ್ತಮವಾಗಿರುವ ಸುಮಾರು 20ಕ್ಕೂ ಹೆಚ್ಚು ಉದ್ಯಾನಗಳ ಅಭಿವೃದ್ಧಿ ಹೆಸರಿನಲ್ಲಿ ಹಣ ಖರ್ಚು ಮಾಡಲಾಗಿದೆ. ಹೊಸ ಉದ್ಯಾನಗಳು, ಜಿಗ್‍ಜಾಗ್ ರಸ್ತೆ, ರಾಜಕಾಲುವೆಗಳಿಗೆ ಕಾಂಕ್ರೀಟ್ ಹೀಗೆ ಅನವಶ್ಯಕ ಕಾಮಗಾರಿಗಳ ಪಟ್ಟಿಯೇ ಸಿಗುತ್ತದೆ. ವಾರಕ್ಕೊಮ್ಮೆ ಕಾಮಗಾರಿ ಪರಿಶೀಲನೆ ಎಂದು ನಗರ ಸುತ್ತಾಡುವ ಸಚಿವರು ಕಮಿಷನ್ ವಸೂಲಿಗೆ ಇಳಿದಿದ್ದಾರೆ. ಇಂತಹ ಅನವಶ್ಯಕ ಕಾಮಗಾರಿಗಳನ್ನು ನಿಲ್ಲಿಸಿ, ಅಗತ್ಯವಾದ ಕಡೆ ಬಳಸಿ ಎಂದು ಅವರು ಆಗ್ರಹಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ನೀರಾವರಿ ಇಲಾಖೆ ಒಂದಕ್ಕೆ ಸುಮಾರು 10 ಸಾವಿರ ಕೋಟಿ ರೂ.ಮಂಜೂರು ಮಾಡಿದ್ದೀರ, ಇದಲ್ಲದೇ ನಗರೋಥ್ಥಾನ, ನವ ನಗರ, ನೀರಿನ ಪೈಪ್ ಅಳವಡಿಕೆ, ವೈಟ್ ಟಾಪಿಂಗ್, ಬ್ಲಾಕ್ ಟಾಪಿಂಗ್ ಸೇರಿದಂತೆ ತೆರೆಮರೆಯಲ್ಲಿ ಕೋಟ್ಯಂತರ ರೂ.ಗಳನ್ನು ನೀರಿನಂತೆ ಖರ್ಚು ಮಾಡಿ, ಈಗ ಸಾಲ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಉರಿಯುವ ಮನೆಯಲ್ಲಿ ಗಳ ಇರಿಯುವ ಸಂಸ್ಕೃತಿ ಬಿಜೆಪಿಗೆ ಹೊಸದಲ್ಲ ಎಂದೇ ಹೇಳಬಹುದು ಎಂದು ಜಗದೀಶ್ ಟೀಕಿಸಿದ್ದಾರೆ.

ಕುಮಾರಸ್ವಾಮಿ ಜತೆ ಸೇರಿ 20-20 ಸರಕಾರ ರಚಿಸಿದಾಗ ಸುಮಾರು 3,545 ಕೋಟಿ, ಸ್ವಂತವಾಗಿ ಕುರ್ಚಿ ಹಿಡಿದಾಗ 25,653 ಕೋಟಿ, ಸದಾನಂದ ಗೌಡ 9,464 ಕೋಟಿ, ಜಗದೀಶ್ ಶೆಟ್ಟರ್ 13,464 ಕೋಟಿ ರೂ.ಸಾಲ ಮಾಡಿದ ಇತಿಹಾಸ ಇರುವ ನಿಮಗೆ ಸಾಲ ಮಾಡುವುದು ಹೊಸದೇನಲ್ಲ. ಡಬಲ್ ಎಂಜಿನ್ ಸರಕಾರ ಬಂದರೆ ‘ಸ್ವರ್ಗ’ ಮಾಡುವುದಾಗಿ ಹೇಳಿ ‘ಸಾಲ’ ಮಾಡುತ್ತಿರುವುದೇ ನಿಮ್ಮ ಸರಕಾರ ಇಷ್ಟು ವರ್ಷದಲ್ಲಿ ಮಾಡಿದ ಸಾಧನೆ ಎಂದು ಅವರು ಟೀಕಿಸಿದ್ದಾರೆ.

ಈಗಲಾದರೂ ಎಚ್ಚೆತ್ತುಕೊಂಡು ಸರಕಾರದ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ, ಸಾಲ ಮಾಡಬಾರದಾಗಿ ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News