×
Ad

ಅಂಬೇಡ್ಕರ್ ಜೀವನಾಧಾರಿತ 'ಮಹಾನಾಯಕ' ಧಾರಾವಾಹಿ ಪ್ರಸಾರ ನಿಲ್ಲಿಸುವಂತೆ ಬೆದರಿಕೆ

Update: 2020-09-04 14:02 IST

ಬೆಂಗಳೂರು, ಸೆ. 4: ಝೀ ಕನ್ನಡ ವಾಹಿನಿಯಲ್ಲಿ ಬಿತ್ತರಗೊಳ್ಳುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ 'ಮಹಾನಾಯಕ' ಧಾರಾವಾಹಿಯನ್ನು ನಿಲ್ಲಿಸುವಂತೆ ಕೆಲ 'ಜಾತಿವಾದಿಗಳು' ಬೆದರಿಕೆ ಸಂದೇಶಗಳು ಹಾಗೂ ಮಧ್ಯರಾತ್ರಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

ಶುಕ್ರವಾರ ಈ ಸಂಬಂಧ ಝೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು, `ಮಹಾನಾಯಕ' ಧಾರಾವಾಹಿಯ ಪ್ರಸಾರವನ್ನು ನಿಲ್ಲಿಸುವಂತೆ ಮಧ್ಯರಾತ್ರಿಯಲ್ಲಿ ತುಂಬಾ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಇದು ನಮ್ಮನ್ನು ಹೆದರಿಸುವಂತೆ ಕಾಣುತ್ತಿದೆ. ಆದರೆ, ವೈಯಕ್ತಿಕವಾಗಿ ಇದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. `ಮಹಾನಾಯಕ' ಧಾರಾವಾಹಿ ಮುಂದುವರಿಯುತ್ತದೆ. ಜೊತೆಗೆ ಇದು ನಮ್ಮ ಹೆಮ್ಮೆಯಾಗಿದ್ದು, ಇದರಲ್ಲಿ ವೈಯಕ್ತಿಕ ಪ್ರೀತಿಯೂ ಸೇರಿದೆ. ಇದನ್ನು ಒಂದು ಸಮಸ್ಯೆ ಎಂದು ನೀವು ಪರಿಗಣಿಸಿದರೆ, ವಾಸ್ತವದಲ್ಲಿ ಸಮಾಜಕ್ಕೆ ನೀವೇ ಒಂದು ಸಮಸ್ಯೆ! ಜೈ ಭೀಮ್' ಎಂದು ಟ್ವೀಟ್ ಮಾಡಿದ್ದಾರೆ.

ರಾಘವೇಂದ್ರ ಹುಣಸೂರು ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, `ಮಹಾನಾಯಕ ಧಾರಾವಾಹಿಯನ್ನು ನಿಲ್ಲಿಸಲು ಮನುವಾದಿ ಮತ್ತು ಜಾತಿವಾದಿಗಳ ಕುತಂತ್ರ ನಡೆಸಿದ್ದು, ಯಾವುದೇ ಕಾರಣಕ್ಕೂ ಸೀರಿಯಲ್ ನಿಲ್ಲಿಸಬೇಡಿ. ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಹಕ್ಕು' ಎಂದು ಹುಣಸೂರು ಬೆಂಬಲಕ್ಕೆ ದಲಿತ ಸಮುದಾಯದವರು, ಸಂಘ-ಸಂಸ್ಥೆಗಳು ಹಾಗೂ ಅಂಬೇಡ್ಕರ್ ಅವರ ಅಭಿಮಾನಿಗಳು ನಿಂತಿದ್ದಾರೆ.

`ನಾವೆಲ್ಲಾ ಒಟ್ಟಾಗಿ ಮಹಾನಾಯಕ ಧಾರಾವಾಹಿ ನೋಡಿದಕ್ಕೆ ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಇನ್ನು ನಾವೆಲ್ಲ ಮಹಾನಾಯಕನ ಆದರ್ಶ ಪಾಲನೆ ಮಾಡಿ ಒಗ್ಗೂಡಿದರೆ ನಿಮಗೆ ಇನ್ನೆಷ್ಟು ಆತಂಕವಾಗಬಹುದು' ಎಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜಾತಿವಾದಿಗಳನ್ನು ಖಾರವಾಗಿ ಪ್ರಶ್ನಿಸಿದ್ದಲ್ಲದೆ, ಮಹಾನಾಯಕ ಧಾರಾವಾಹಿಯನ್ನು ನಿಲ್ಲಿಸಬೇಡಿ, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ತಿಳಿಸಿದೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ರವಿವಾರ ಪ್ರಸಾರವಾಗುತ್ತಿರುವ ಡಾ.ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿ ಮಕ್ಕಳು, ಮಹಿಳೆಯರು, ದಲಿತ ಸಮುದಾಯ ಸೇರಿದಂತೆ ಸಾರ್ವಜನಿಕ ವಲಯ ಅತ್ಯಂತ ಜನಪ್ರಿಯತೆ ಗಳಿಸಿದ್ದು, ರಾಜ್ಯಾದ್ಯಂತ ಮನೆಮಾತಾಗಿದೆ. ಈ ಧಾರಾವಾಹಿಯಲ್ಲಿನ ಅಂಬೇಡ್ಕರ್ ಪಾತ್ರದಾರಿ ಬಾಲಕನ ಬ್ಯಾನರ್, ಕಟೌಟ್‍ಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ.

ಸಂವಿಧಾನ ಹತ್ತಿಕ್ಕುವ ಶಕ್ತಿಗಳದೇ ಕೆಲಸ

ಅಂಬೇಡ್ಕರ್ ಅವರ ಹೋರಾಟ ಮತ್ತು ಸಂವಿಧಾನವನ್ನು ಹತ್ತಿಕ್ಕುವ ಶಕ್ತಿಗಳೇ, ಅವರ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರ ಜೀವನವನ್ನು ಆಧರಿಸಿದ ಮಹಾನಾಯಕ ಧಾರಾವಾಹಿ ಕನ್ನಡ ಕಿರುತೆರೆಯಲ್ಲೇ ಹೊಸ ಸಂಚಲನ ಸೃಷ್ಟಿಸಿದೆ. ಬಾಲ್ಯದಲ್ಲಿ ಅಂಬೇಡ್ಕರ್ ಏನೆಲ್ಲ ಕಷ್ಟಗಳನ್ನು ಸಹಿಸಿ ವಿದ್ಯಾಬ್ಯಾಸ ಮಾಡಿದರೂ ಎಂಬುದು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಪ್ರೇರಣೆಯಾಗಿದೆ. ಅಕ್ಷರಲೋಕದಿಂದ ದೂರವೇ ಉಳಿದಿದ್ದವರಿಗೆ ಅಂಬೇಡ್ಕರ್ ಅವರಂತೆ ನಾನು ಕಲಿಯಬೇಕೆಂಬ ಉತ್ಸಾಹ ಮೂಡಿಸುತ್ತಿದೆ. ಇದನ್ನು ತಡೆಯಲು ಜಾತಿವಾದಿ ಮನಸ್ಸುಗಳು ಧಾರಾವಾಹಿ ನಿಲ್ಲಿಸಲು ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಆದರೆ, ಝೀ ಮುಖ್ಯಸ್ಥರು ಇಂತಹ ಬೆದರಿಕೆಗಳಿಗೆ ಮಣಿಯುವ ಅಗತ್ಯವಿಲ್ಲ. ಅವರೊಂದಿಗೆ ಅಂಬೇಡ್ಕರ್ ಪ್ರೀತಿಸುವ ಜನತೆ ಹಾಗೂ ದಲಿತ ಸಮುದಾಯ ಇರಲಿದೆ. ಮಹಾನಾಯಕ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿಬರಲಿ'

-ಲಕ್ಷ್ಮೀನಾರಾಯಣ ನಾಗವಾರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News