ಯುಎಪಿಎ ಹೇರಿಕೆ, ಎಸ್.ಡಿ.ಪಿ.ಐ. ಕಚೇರಿಗೆ ದಾಳಿ ರಾಜ್ಯ ಸರಕಾರದ ತಾರತಮ್ಯ ನೀತಿಗೆ ಹಿಡಿದ ಕನ್ನಡಿ: ಐಎಸ್.ಎಫ್.

Update: 2020-09-06 05:09 GMT

ದಮ್ಮಾಮ್, ಸೆ.6:‌ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು ಮುನ್ನೂರರಷ್ಟು ಮಂದಿಯ ಮೇಲೆ ಯುಎಪಿಎ ಹೇರಿರುವುದು ಮತ್ತು ನಂತರದಲ್ಲಿ ಎಸ್.ಡಿ.ಪಿ.ಐ. ಕ‍ಚೇರಿಯ ಮೇಲೆ ನಡೆದ ಪೊಲೀಸರ ದಾಳಿ ಅತ್ಯಂತ ಪೂರ್ವಾಗ್ರಹ ಪೀಡಿತ ಮತ್ತು ತಾರತಮ್ಯದ ನಡೆಯಾಗಿದ್ದು, ಇದು ಖಂಡನೀಯ ಎಂದು  ಇಂಡಿಯನ್ ಸೋಶಿಯಲ್ ಫ಼ೋರಂ(ಐಎಸ್.ಎಫ್.)  ಸೌದಿ ಅರೇಬಿಯಾ ಹೇಳಿದೆ.

ದೇಶದ ವಿರುದ್ಧ ಸಂಘಟಿತವಾಗಿ ಅಪರಾಧ ನಡೆಸುವ ಭಯೋತ್ಪಾದನೆಯಂತಹ ಪ್ರಕರಣಗಳಲ್ಲಷ್ಟೆ ಯು.ಎ.ಪಿ.ಎ ಯನ್ನು ಹೇರಬಹುದಾಗಿದೆ. ಬೆಂಗಳೂರು ಪ್ರಕರಣದಲ್ಲಿ  ಪೊಲೀಸರು ಎಫ಼್.ಐ.ಆರ್ ದಾಖಲಿಸಲು ವಿಳಂಬಿಸಿದ್ದಾಕ್ಕಾಗಿ ಆಕ್ರೋಶಿತಗೊಂಡ ಜನರ ಗುಂಪು ಸ್ವಯಂ ಪ್ರೇರಿತರಾಗಿ ಹಿಂಸಾಚಾರಕ್ಕೆ ಇಳಿದಿದ್ದರು. ಇಲ್ಲಿ ಯು.ಎ.ಪಿ.ಎ ದಾಖಲಿಸುವ ಯಾವುದೇ ಅವಕಾಶವೂ ಇರಲಿಲ್ಲ. ಆದರೆ  ಅಪರಾಧ ಸಂಖ್ಯೆ 195/2020 ಮತ್ತು ಅಪರಾಧ ಸಂಖ್ಯೆ 229/2020ರಲ್ಲಿ ಪೊಲೀಸರು ಕ್ರಮವಾಗಿ ‌109 ಮತ್ತು 149 ಮಂದಿಯ  ಮೇಲೆ ಯು.ಎ.ಪಿ.ಎ ಕರಾಳ ಕಾಯ್ದೆಯನ್ನು ಹೇರಿರುವುದು ಅತ್ಯಂತ ತಾರತಮ್ಯದ ನಡೆಯಾಗಿದೆ. ಬಿಜೆಪಿ ಆಡಳಿತಕ್ಕೆ ಬಂದ ನಂತರ ದೇಶದಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಸರಕಾರದ  ಪೂರ್ವಾಗ್ರಹ ಪೀಡಿತ ಮತ್ತು ತಾರತಮ್ಯದ ಕ್ರಮಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ರಾಜ್ಯದ ಎಲ್ಲಾ ನಾಗರಿಕ ಹಕ್ಕು ಸಂಘಟನೆಗಳು ಇದನ್ನು ವಿರೋಧಿಸಬೇಕಾಗಿದೆ ಎಂದು ಐಎಸ್.ಎಫ್. ಸೌದಿ ಅರೇಬಿಯಾ

ಇದರ ಅಧ್ಯಕ್ಷ ಮುಹಮ್ಮದ್ ಶರೀಫ಼್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಗಳು ಆರಂಭವಾದಾಗ ಎಸ್.ಡಿ.ಪಿ.ಐಯ ಸ್ಥಳೀಯ ನಾಯಕ ಮುಝಮ್ಮಿಲ್‌ ಪಾಶ ಪೊಲೀಸರ ಕೋರಿಕೆಯ ಮೇರೆಗೆ ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದರು. ಎನ್.ಡಿ.ಟಿ.ವಿ.ಯಂತಹ ಜನಪರ ಮಾಧ್ಯಮಗಳು ಈ ಕುರಿತು ವೀಡಿಯೊಗಳನ್ನೂ ಪ್ರಕಟಿಸಿದ್ದವು. ಆದರೆ ಇದೀಗ ಮುಝಮ್ಮಿಲ್ ಪಾಶರವರನ್ನು ಬಂಧಿಸುವ ಮೂಲಕ ಸಂಪೂರ್ಣ ಪ್ರಕರಣವನ್ನು ಎಸ್.ಡಿ.ಪಿ.ಐ ತಲೆಗೆ ಕಟ್ಟುವ ಹುನ್ನಾರವನ್ನು ರಾಜ್ಯ ಸರಕಾರ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಎಸ್.ಡಿ.ಪಿ.ಐ ಕಚೇರಿಯ ಮೇಲೆ ಪೊಲೀಸ್ ದಾಳಿಗಳನ್ನು ಮಾಡಲಾಗುತ್ತಿದೆ.  ರಾಜ್ಯ ಸರಕಾರದ ವೈಫ಼ಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಕೊಂಡೊಯ್ಯುವ ವ್ಯವಸ್ಥಿತ ಪ್ರಯತ್ನ ಇದಾಗಿದ್ದು ರಾಜ್ಯದ ಜನತೆ ಇದನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದವರು ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News