ಇಂದಿನ ವಿಶ್ವವಿದ್ಯಾಲಯಗಳು ಪ್ರಮಾಣಪತ್ರ ನೀಡುವ ಕಾರ್ಖಾನೆಗಳಾಗಿವೆ: ನ್ಯಾ.ರಾಜೇಂದ್ರ ಬಾಬು

Update: 2020-09-06 11:38 GMT

ಬೆಂಗಳೂರು, ಸೆ. 6: ಇಂದಿನ ವಿಶ್ವವಿದ್ಯಾಲಯಗಳು ಪ್ರಮಾಣಪತ್ರಗಳನ್ನು ನೀಡುವ ಕಾರ್ಖಾನೆಗಳಾಗಿವೆ. ಈ ವ್ಯವಸ್ಥೆ ಬದಲಾಗಿ, ದೇಶದ ಪ್ರತಿಯೊಬ್ಬ ಪ್ರಜೆಯನ್ನು ಮನುಷ್ಯನನ್ನಾಗಿಸುವ ಶಿಕ್ಷಣ ಬೇಕಾಗಿದೆ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾ.ರಾಜೇಂದ್ರ ಬಾಬು ತಿಳಿಸಿದ್ದಾರೆ.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಆಯೋಜಿಸಿದ್ದ ಶಿಕ್ಷಣ ಮತ್ತು ಉಪನ್ಯಾಸಕರ ಸಮಸ್ಯೆಗಳು ಮತ್ತು ಮುಂದಿನ ದಾರಿ ರಾಜ್ಯ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಇಂದು ವೈಜ್ಞಾನಿಕ, ಧರ್ಮನಿರಪೇಕ್ಷ ಮತ್ತು ಪ್ರಜಾಸತ್ತಾತ್ಮಕ ಶಿಕ್ಷಣವನ್ನು ನಾವು ಎತ್ತಿ ಹಿಡಿಯಬೇಕಿದೆ ಎಂದು ತಿಳಿಸಿದರು.

ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಮಾತನಾಡಿ, ಶಿಕ್ಷಕರು ಶಿಕ್ಷಣ ಕ್ಷೇತ್ರದ ಹೃದಯವಿದ್ದಂತೆ. ಆದರೆ, ನಮ್ಮ ವ್ಯವಸ್ಥೆ ಹೃದಯವನ್ನೇ ನಿರ್ಲಕ್ಷಿಸುವ ರೀತಿಯಲ್ಲಿ ಶಿಕ್ಷಕರನ್ನು ಕಡೆಗಣಿಸಲಾಗುತ್ತಿದೆ. ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಹೊಸ ಶಿಕ್ಷಣ ನೀತಿಯಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸೂಚಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನಯೆಂಬ ನೀತಿಯನ್ನು ಸರಕಾರ ಜಾರಿಗೊಳಿಸುತ್ತಿಲ್ಲ. ಸರಕಾರ ಶಿಕ್ಷಕರ ಸಮಸ್ಯೆಗಳಿಗೆ
ಕಿವುಡಾಗಿದೆ. ಸೇವಾ ಭದ್ರತೆ ಸೌಲಭ್ಯ ಪಿಂಚಣಿಯನ್ನು ಕೊಡುತ್ತಿಲ್ಲ. ಹಸಿದ ಹೊಟ್ಟೆಯಲ್ಲಿರುವ ಶಿಕ್ಷಕರ ಕೈಯಿಂದ
ನಾವು ಎಂತಹ ಶಿಕ್ಷಣವನ್ನು ನಿರೀಕ್ಷಿಸಲು ಸಾಧ್ಯವೆಂದು ಅವರು ಪ್ರಶ್ನಿಸಿದರು.

ಆರ್ಥಿಕ ತಜ್ಞ ಕೆ.ಸಿ.ರಘು ಮಾತನಾಡಿ, ಶಿಕ್ಷಕರ ಸಮಸ್ಯೆ ಕೇವಲ ಅವರಿಗಷ್ಟೆ ಸೀಮಿತವಲ್ಲ. ಅದು ಸಮಾಜದ ಸಮಸ್ಯೆ ಹಾಗೂ ದೇಶದ ಸಮಸ್ಯೆಯಾಗಿದೆ. ಹೀಗಾಗಿ ನಮ್ಮ ಸರಕಾರಗಳು ಆದ್ಯತೆಯ ಮೇರೆಗೆ ಶಿಕ್ಷಕರ ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ತಿಳಿಸಿದರು. ಈ ವೇಳೆ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News