ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ: ನಟಿ ರಾಗಿಣಿ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ

Update: 2020-09-07 14:37 GMT

ಬೆಂಗಳೂರು, ಸೆ.7: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ನಟಿ ರಾಗಿಣಿ ದ್ವಿವೇದಿ ಅನ್ನು ಪುನಃ ಐದು ದಿನಗಳ ಕಾಲ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದು, ವಿಚಾರಣೆ ವೇಳೆ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.

ಶುಕ್ರವಾರ ರಾಗಿಣಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆರಂಭದಲ್ಲಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಸೋಮವಾರ ಅವಧಿ ಮುಕ್ತಾಯವಾದ ಹಿನ್ನೆಲೆ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಈ ವೇಳೆ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ಹಿನ್ನೆಲೆ ಮತ್ತೆ ವಶಕ್ಕೆ ನೀಡುವಂತೆ ಕೋರಿದರು. ಸಿಸಿಬಿ ಮನವಿಯನ್ನು ಪುರಸ್ಕರಿಸಿದ ನಗರದ 1ನೇ ಎಸಿಎಂಎಂ ನ್ಯಾಯಾಲಯ ಮತ್ತೆ 5 ದಿನಗಳ ಕಾಲ ವಶಕ್ಕೆ ಒಪ್ಪಿಸಿದೆ.

ಇನ್ನು, ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ ರಾಗಿಣಿ ಪರ ವಕೀಲರು, ವಿಚಾರಣೆಗೆ ಸಹಕರಿಸುತ್ತೇವೆ, ರಾಗಿಣಿಗೆ ಆರೋಗ್ಯ ಸರಿಯಿಲ್ಲದಿರುವುದರಿಂದ ಅವರಿಗೆ ಜಾಮೀನು ನೀಡಬೇಕು ಎಂದು ಕೇಳಿಕೊಂಡರು. ಇದೇ ವೇಳೆ ಸಿಸಿಬಿ ಪರ ವಾದಿಸಿದ ವಕೀಲರು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಮುಖ್ಯವಾಗಿ ಆರೋಪಿ ನಟಿ ಡ್ರಗ್ಸ್ ಜಾಲದಲ್ಲಿ ಅಂತಾರಾಜ್ಯ ಸಂಪರ್ಕ ಹೊಂದಿರುವ ಶಂಕೆ ಇದೆ. ಹೀಗಾಗಿ ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ತನಿಖಾಧಿಕಾರಿಗಳ ಮನವಿ ಪುರಸ್ಕರಿಸಿದ ನ್ಯಾಯಾಲಯ ನಟಿ ರಾಗಿಣಿ ದ್ವಿವೇದಿ ಅವರನ್ನು 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ವಿಚಾರಣೆ ಮುಂದೂಡಿತು.

ಆಪ್ತರ ಮೇಲೆ ಪ್ರತ್ಯೇಕ ಎಫ್‍ಐಆರ್: ಇದೇ ಪ್ರಕರಣದಲ್ಲಿ ಬಂಧಿತನಾಗಿರುವ ರಾಗಿಣಿ ಆಪ್ತ ರವಿಶಂಕರ್, ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2018 ರಲ್ಲಿ ಡಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಬಂದಿದ್ದ. ಸದ್ಯ ಹಳೆ ಪ್ರಕರಣಕ್ಕೆ ಮರುಜೀವ ಕೊಟ್ಟ ಪೊಲೀಸರು ಕಾಟನ್ ಪೇಟೆಯಲ್ಲಿ ಠಾಣೆಯಲ್ಲಿ  ಪ್ರತ್ಯೇಕ ಎಫ್‍ಐಆರ್ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ, ಪ್ರಮುಖವಾಗಿ ಈತನ ವಿರುದ್ಧ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ ಆರೋಪಗಳಿವೆ ಎಂದು ತಿಳಿದುಬಂದಿದೆ.

ದುಬಾರಿ ಪಾರ್ಟಿ ಆಯೋಜಕ ಖನ್ನಾ?

ಪ್ರಕರಣದ 3ನೆ ಆರೋಪಿ ವೀರೇನ್ ಖನ್ನಾ, ಬೆಂಗಳೂರು ಸೇರಿದಂತೆ ನಾನಾ ಕಡೆಯ ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ದುಬಾರಿ ಶುಲ್ಕು ಪಾವತಿ ಮಾಡುವ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ. ಬಳಿಕ ಇಲ್ಲಿಗೆ ಬರುವ ಯುವಕ-ಯುವತಿಯರನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

5ನೇ ಆರೋಪಿ ಭಿನ್ನ ದಂಧೆ ?

ಪ್ರಕರಣದ ಎಫ್‍ಐಆರ್ ನಲ್ಲಿ 5ನೆ ಆರೋಪಿ ಆಗಿರುವ ವೈಭವ್ ಜೈನ್ ಕೇವಲ ಮಾದಕ ವಸ್ತುಗಳ ಮಾರಾಟವಲ್ಲದೆ ಹವಾಲಾ ದಂಧೆಯಲ್ಲೂ ತೊಡಗಿಸಿಕೊಂಡಿದ್ದ ಎಂಬುದು ಬಯಲಾಗಿದೆ ಎಂದು ಹೇಳಲಾಗುತ್ತಿದೆ.

ಸದಾಶಿವನಗರ ಹಾಗೂ ಆರ್‍ಎಂವಿ ಬಡಾವಣೆಗಳಲ್ಲಿ ವಾಸವಾಗಿರುವ ಶ್ರೀಮಂತರ ಮಕ್ಕಳೊಂದಿಗೆ ಈತ ಮಾದಕ ದ್ರವ್ಯ ಮಾರಾಟದ ಜೊತೆಗೆ ದುಬೈ ಲಂಡನ್ ಹಾಗೂ ಅಮೆರಿಕದಿಂದ ಭಾರತಕ್ಕೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಗೊತ್ತಾಗಿದೆ.

ಹೆಸರಿಗೆ ಮಾತ್ರ ಚಿನ್ನದ ಅಂಗಡಿ ನಡೆಸುತ್ತಿದ್ದ ಈತ, ಐಪಿಎಲ್ ಬೆಟ್ಟಿಂಗ್ ಕೂಡ ನಡೆಸುತ್ತಿದ್ದ. ಮಲ್ಲೇಶ್ವರನ ಕೋದಂಡರಾಮಪುರದಲ್ಲಿ ವಾಸವಾಗಿರುವ ಈತ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಗಡಿಯಾರಗಳನ್ನು ಕಡಿಮೆ ಹಣಕ್ಕೂ ಮಾರುತ್ತಿದ್ದ ಎನ್ನಲಾಗುತ್ತಿದೆ.

ಕೇರಳ ಮೂಲದ ನಿಯಾಝ್ ಬಂಧನ

ಡ್ರಗ್ಸ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೇರಳ ಮೂಲದ ನಿಯಾಝ್ ಎಂಬಾತನನ್ನು ಸೋಮವಾರ ಬಂಧಿಸಿದ್ದಾರೆ. ಈತ ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದು, ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News