ಕೋವಿಡ್-19: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂಬತ್ತು ಲಕ್ಷಕ್ಕೆ ಸನಿಹ

Update: 2020-09-09 03:36 GMT

ಹೊಸದಿಲ್ಲಿ : ದೇಶದಲ್ಲಿ ಮಂಗಳವಾರ ಮತ್ತೆ 89 ಸಾವಿರಕ್ಕೂ ಅಧಿಕ ಹೊಸ ಕೋವಿಡ್-19 ಪ್ರಕರಣಗಳ ಸೇರ್ಪಡೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಒಂಬತ್ತು ಲಕ್ಷದ ಸನಿಹಕ್ಕೆ ಬಂದಿದೆ. ಮಂಗಳವಾರ ಕೂಡಾ ದೇಶದಲ್ಲಿ 1125 ಮಂದಿ ಸೋಂಕಿಗೆ ಬಲಿಯಾಗಿದ್ದರೆ. ಸೋಮವಾರವೂ ಇಷ್ಟೇ ಸಂಖ್ಯೆಯ ಮಂದಿ ಸೋಂಕಿನಿಂದ ಮೃತಪಟ್ಟಿದ್ದರು.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷ ದಾಟಿದ ಬಳಿಕ ಕೇವಲ ಎಂಟು ದಿನದಲ್ಲಿ ಒಂದು ಲಕ್ಷದಷ್ಟು ಸಕ್ರಿಯ ಪ್ರಕರಣಗಳು ಹೆಚ್ಚಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಜುಲೈನಲ್ಲಿ 5 ಲಕ್ಷದ ಗಡಿ ದಾಟಿದ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ.
ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಲೇ ಇರುವ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಹೆಚ್ಚಿನ ಸಂಖ್ಯೆಯ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಗಳೂ ಹೆಚ್ಚುತ್ತಿವೆ ಎಂದು ಸಮರ್ಥಿಸಿಕೊಂಡಿದೆ.

ಈ ಮಧ್ಯೆ ದೆಹಲಿ ಸರ್ಕಾರ, ವೈದ್ಯರ ಶಿಫಾರಸ್ಸು ಇಲ್ಲದೇ ಬೇಡಿಕೆಗೆ ಅನುಗುಣವಾಗಿ ಕೋವಿಡ್ ಪರೀಕ್ಷೆ ನಡೆಸಲು ಅಕಾಶ ಮಾಡಿಕೊಟ್ಟಿದೆ. ವೈದ್ಯರ ಶಿಫಾರಸ್ಸು ಪತ್ರ ಇಲ್ಲದೇ ಜನಸಾಮಾನ್ಯರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಸೂಚನೆ ನೀಡಿದ್ದಾರೆ. ಇದೀಗ ಜನಸಾಮಾನ್ಯರು ನೇರವಾಗಿ ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ.

ದೇಶದಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿರುವ ಐದು ರಾಜ್ಯಗಳಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಶೇಕಡ 62ರಷ್ಟು ಪ್ರಕರಣಗಳು ಇವೆ ಎನ್ನುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಹಾಗೂ ತಮಿಳುನಾಡು ಈ ಐದು ರಾಜ್ಯಗಳು. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಈ ರಾಜ್ಯದ ಪಾಲು 62 ಶೇಕಡ ಇದ್ದರೆ, ಒಟ್ಟು ಕೋವಿಡ್ ಸಾವಿನ ಪೈಕಿ ಈ ರಾಜ್ಯಗಳ ಪಾಲು ಶೇಕಡ 72ರಷ್ಟಾಗಿದೆ.

ದೇಶದಲ್ಲಿ ಇದುವರೆಗೆ 42,80,422 ಪ್ರಕರಣಗಳು ವರದಿಯಾಗಿದ್ದು, 8,83,697 ಸಕ್ರಿಯ ಪ್ರಕರಣಗಳಿವೆ. 72775 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರ ಸಿಂಹಪಾಲು (26.8%) ಹೊಂದಿದ್ದು, ಪ್ರಸ್ತುತ 2.3 ಲಕ್ಷ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ತಮಿಳುನಾಡಿನಲ್ಲಿ 51,200 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ರಾಜ್ಯದ ಪಾಲು 5.8% ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News