ಕಂಗನಾ ಕಚೇರಿ ದ್ವಂಸ ಕಾರ್ಯಾಚರಣೆ ನಿಲ್ಲಿಸಿ: ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್ ಆದೇಶ

Update: 2020-09-09 17:51 GMT

ಮುಂಬೈ,ಸೆ.9: ಬಾಂದ್ರಾದ ಪಾಲಿಹಿಲ್ ಪ್ರದೇಶದಲ್ಲಿರುವ ತನ್ನ ಬಂಗಲೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ನೋಟಿಸಿನ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ಬಾಂಬೆ ಉಚ್ಚ ನ್ಯಾಯಾಲಯವು ಕೈಗೆತ್ತಿಕೊಳ್ಳುವ ಒಂದು ಗಂಟೆ ಮೊದಲು ಬಿಎಂಸಿಯು ಬಂಗಲೆಯ ಆವರಣದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂಬ ಕಾರಣ ನೀಡಿ ಅದನ್ನು ಭಾಗಶಃ ಕೆಡವಿದೆ. ಆದರೆ ಅಪರಾಹ್ನ 12:30ಕ್ಕೆ ವಿಚಾರಣೆಯನ್ನು ಆರಂಭಿಸಿದ ನ್ಯಾಯಾಲಯವು ನೆಲಸಮ ಕಾರ್ಯಕ್ಕೆ ತಡೆಯಾಜ್ಞೆಯನ್ನು ನೀಡಿದೆ ಮತ್ತು ಕಂಗನಾರ ಅರ್ಜಿಗೆ ಉತ್ತರಿಸುವಂತೆ ಬಿಎಂಸಿಗೆ ಸೂಚಿಸಿದೆ.

ಕಂಗನಾ ಬುಧವಾರ ತನ್ನ ತವರುರಾಜ್ಯ ಹಿಮಾಚಲ ಪ್ರದೇಶದಿಂದ ಮುಂಬೈಗೆ ಮರಳಿದ್ದು, ಇದಕ್ಕೆ ಗಂಟೆಗಳ ಮುನ್ನ,ಅಂದರೆ ಪೂರ್ವಾಹ್ನ 11 ಗಂಟೆಯ ಸುಮಾರಿಗೆ ಬಿಎಂಸಿ ನೆಲಸಮ ಕಾರ್ಯವನ್ನು ಆರಂಭಿಸಿತ್ತು. ನೆಲಸಮವನ್ನು ಉಲ್ಲೇಖಿಸಿ ಕಂಗನಾಗೆ ಎರಡನೇ ನೋಟಿಸ್‌ನ್ನು ಸಹ ಬಿಎಂಸಿ ಹೊರಡಿಸಿದೆ.

 ಬಿಜೆಪಿಗೆ ಆಪ್ತರಾಗಿದ್ದಾರೆ ಎಂದು ಪರಿಗಣಿಸಲಾಗಿರುವ ಕಂಗನಾ ತನ್ನ ಬಂಗಲೆಯ ಆವರಣದಲ್ಲಿ ಅಕ್ರಮ ನಿರ್ಮಾಣದ ಆರೋಪವನ್ನು ತಿರಸ್ಕರಿಸಿದ್ದಾರೆ. ನೆಲಸಮ ಕಾರ್ಯ ಆರಂಭಗೊಂಡ ಬೆನ್ನಿಗೇ ಅವರು ಶಿವಸೇನಾ ಆಡಳಿತದ ಬಿಎಂಸಿಯ ಕ್ರಮವನ್ನು ಖಂಡಿಸಿ ಟ್ವಿಟರ್ ದಾಳಿಯನ್ನು ಆರಂಭಿಸಿದ್ದರು.

 ಕಳೆದೊಂದು ವಾರದಿಂದ ಕಂಗನಾ ಹಾಗೂ ಆಡಳಿತ ಶಿವಸೇನೆ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಸಹನಟ ಸುಷಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಬಳಿಕ ಮುಂಬೈ ಸುರಕ್ಷಿತವಲ್ಲ ಎಂದು ತಾನು ಭಾವಿಸಿದ್ದೇನೆ ಎಂಬ ಕಂಗನಾ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಶಿವಸೇನೆ ಸಂಸದ ಸಂಜಯ್ ರಾವತ್ ಅವರು,ಮುಂಬೈಗೆ ಬರಬೇಡಿ ಎಂದು ಅವರಿಗೆ ಸೂಚಿಸಿದ್ದರು. ಟ್ವೀಟ್ ಮೂಲಕ ರಾವತ್‌ಗೆ ತಿರುಗೇಟು ನೀಡಿದ್ದ ಕಂಗನಾ, ಅವರು ತನಗೆ ಬಹಿರಂಗ ಬೆದರಿಕೆ ಒಡ್ಡಿದ್ದಾರೆ ಮತ್ತು ಮುಂಬೈಗೆ ಮರಳದಂತೆ ಸೂಚಿಸಿದ್ದಾರೆ,ಮುಂಬೈ ಈಗ ಪಾಕ್ ಆಕ್ರಮಿತ ಕಾಶ್ಮೀರದ ಅನುಭವ ನೀಡುತ್ತಿದೆ ಎಂದು ಹೇಳಿದ್ದರು.

ಕಂಗನಾ ಮುಂಬೈ ಪೊಲೀಸರನ್ನೂ ಟೀಕಿಸಿದ್ದು,ಅವರು ಮುಂಬೈ ಮತ್ತು ಮಹಾರಾಷ್ಟ್ರವನ್ನು ಮಾತ್ರವಲ್ಲ,ರಾಜ್ಯ ಪೊಲೀಸ್ ಇಲಾಖೆಯನ್ನೂ ಅವಮಾನಿಸಿದ್ದಾರೆ ಎಂದು ಶಿವಸೇನೆ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕಂಗನಾ ಹೇಳಿಕೆಯನ್ನು ಬಿಜೆಪಿಯೂ ಖಂಡಿಸಿದೆ. ಮಂಗಳವಾರ ಸುದ್ದಿಗಾರರೊಂದಿಗ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಅವರು,ಕಂಗನಾರ ಹೇಳಿಕೆ ತಪ್ಪು ಮತ್ತು ಬಿಜೆಪಿ ಅದನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದರು.

ನೆಲಸಮಕ್ಕೆ ಎರಡು ದಿನಗಳ ಮುನ್ನ ಕಂಗನಾರ ಕಚೇರಿ ಮತ್ತು ಬಂಗಲೆಗೆ ದಿಢೀರ್ ಭೇಟಿ ನೀಡಿದ್ದ ಬಿಎಂಸಿ ಅಧಿಕಾರಿಗಳು ಆವರಣವನ್ನು ಪರಿಶೀಲಿಸಿದ್ದರು ಮತ್ತು ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು 24 ಗಂಟೆಗಳಲ್ಲಿ ಸ್ಥಗಿತಗೊಳಿಸುವಂತೆ ಕಂಗನಾಗೆ ನೋಟಿಸ್ ಹೊರಡಿಸಿದ್ದರು. ಕಂಗನಾರ ಸಿಬ್ಬಂದಿಗಳನ್ನು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಕಚೇರಿಯ ಹೊರಗೆ ಅಂಟಿಸಿದ್ದು,ಕಾಮಗಾರಿಯನ್ನು ತಕ್ಷಣ ನಿಲ್ಲಿಸದಿದ್ದರೆ ಜೈಲುಶಿಕ್ಷೆಯ ಜೊತೆಗೆ ದಂಡವನ್ನ್ನೂ ಪಾವತಿಸಬೇಕಾಗುತ್ತದೆ ಎಂದು ಅದರಲ್ಲಿ ಕಂಗನಾರಿಗೆ ಎಚ್ಚರಿಕೆ ನೀಡಲಾಗಿತ್ತು.

ಮಂಗಳವಾರ ಈ ನೋಟಿಸನ್ನು ವಿರೋಧಿಸಿ ಕಂಗನಾರ ವಕೀಲರು ಮಂಗಳವಾರ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

ತನ್ಮಧ್ಯೆ ಸೆ.8ರಂದು ಗೃಹ ಸಚಿವಾಲಯವು ಕಂಗನಾರಿಗೆ ವೈ ದರ್ಜೆಯ ಭದ್ರತೆಯನ್ನು ಮಂಜೂರು ಮಾಡಿದ್ದು, ಇದೇ ವೇಳೆ ಕಾಂಗ್ರೆಸ್ ಶಾಸಕ ಅಶೋಕ ಜಗತಾಪ್ ಅವರು ‘ಮುಂಬೈಯನ್ನು ಅವಮಾನಿಸಿ ಹೇಳಿಕೆಗಾಗಿ ’ ಕಂಗನಾರ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಸೂಚನೆಯನ್ನು ಮಂಡಿಸಿದ್ದಾರೆ.

ಕಂಗನಾ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದರು ಎಂದು ಸುಮನ್ ಮಾಡಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಗೃಹ ಸಚಿವ ಅನಿಲ್ ದೇಶಮುಖ್ ಅವರು ಪೊಲೀಸರಿಗೆ ನಿರ್ದೇಶ ನೀಡಿದ್ದಾರೆ.

           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News