“ಕೆಟ್ಟ ವ್ಯಕ್ತಿಯಾಗಿದ್ದ ಎಂಬ ಮಾತ್ರಕ್ಕೆ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗದು”

Update: 2020-09-10 13:36 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.10: ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯು ‘ಕೆಟ್ಟ ವ್ಯಕ್ತಿ’ಯಾಗಿರುವುದರಿಂದ ಆತನಿಗೆ ಜಾಮೀನು ನೀಡಕೂಡದು ಎಂಬ ಪೊಲೀಸರ ವಾದವನ್ನು ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿದೆ. ಕೆಟ್ಟ ವ್ಯಕ್ತಿ ಎಂಬ ಹಣೆಪಟ್ಟಿ ಅಂಟಿಸಲ್ಪಟ್ಟ ಮಾತ್ರಕ್ಕೆ ಆತನನ್ನು ಜೈಲಿನಲ್ಲಿ ಕೊಳೆಸುವಂತಿಲ್ಲ ಎಂದು ಹೇಳಿದ ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

ನ್ಯಾ.ವಿನೋದ ಯಾದವ ಅವರು 20,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆಯ ಆಧಾರದಲ್ಲಿ ಆರೋಪಿ ನೀರಜ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.

ನೀರಜ್ ಭಜನಪುರ ಪ್ರದೇಶದಲ್ಲಿ ದಂಗೆಗಳ ಸಂದರ್ಭದಲ್ಲಿ ಕಳ್ಳತನ ಮತ್ತು ದಾಂಧಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದು,ಆತನ ಸಹ ಆರೋಪಿ ಮಹೇಶ್ ಎಂಬಾತ ನೀಡಿದ್ದ ಮಾಹಿತಿಯಂತೆ ಆತನನ್ನು ಬಂಧಿಸಲಾಗಿದೆ. ಆರೋಪಿಯು 10 ದಂಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಹಿಂದೆ ನ್ಯಾಯಾಲಯದಿಂದ ಶಿಕ್ಷೆಗೂ ಒಳಗಾಗಿರುವ ಆತ ತನ್ನ ಪ್ರದೇಶದಲ್ಲಿ ಕೆಟ್ಟ ವ್ಯಕ್ತಿಯಾಗಿದ್ದಾನೆ ಮತ್ತು ಈ ಹಂತದಲ್ಲಿ ಜಾಮೀನು ಬಿಡುಗಡೆಗೊಳಿಸಿದರೆ ಆತ ಸಾಕ್ಷಿಗಳಿಗೆ ಬೆದರಿಕೆ ಒಡ್ಡಬಹುದು ಎಂದು ವಿಶೇಷ ಸರಕಾರಿ ಅಭಿಯೋಜಕ ನರೇಶ ಕುಮಾರ ಗೌರ್ ಅವರು ವಿಚಾರಣೆ ಸಂದರ್ಭ ವಾದಿಸಿದರು.

ತನ್ಮಧ್ಯೆ ನೀರಜ್ ಪರ ವಕೀಲರು ತನ್ನ ಕಕ್ಷಿದಾರನ ವಿರುದ್ಧ ಸಿಸಿಟಿವಿ ಫೂಟೇಜ್‌ನಂತಹ ಯಾವುದೇ ವಿದ್ಯುನ್ಮಾನ ಸಾಕ್ಷಗಳಾಗಲೀ,ಕಾಲ್ ರೆಕಾರ್ಡ್ಸ್‌ಗಳಾಗಲೀ ಇಲ್ಲ ಎಂದು ವಾದಿಸಿದರು.

  ಪ್ರಕರಣದಲ್ಲಿ ನೀರಜ್ ಪಾತ್ರವು ಈಗಾಗಲೇ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಸಹ ಆರೋಪಿ ಮಹೇಶ ಪಾತ್ರಕ್ಕಿಂತ ಭಿನ್ನವಾಗಿದೆ ಎನ್ನುವುದನ್ನು ಸಾಬೀತುಗೊಳಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ. ತನ್ನದೇ ಹೇಳಿಕೆಯ ಹೊರತಾಗಿ ಪ್ರಕರಣದಲ್ಲಿ ಆರೋಪಿಯ ಗುರುತನ್ನು ಸಾಬೀತುಗೊಳಿಸುವ ಯಾವುದೇ ಸಂಬಂಧಿತ ಸಾಕ್ಷಗಳಿಲ್ಲ ಎಂದು ನ್ಯಾಯಾಧೀಶರು ತನ್ನ ಆದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News