ಸಂವಿಧಾನದ ತಿದ್ದುಪಡಿಗಳಿಗೆ ಬೆಲೆಯೇ ಇಲ್ಲವೇ?

Update: 2020-09-11 17:40 GMT

ಮಾನ್ಯರೇ,

ರಾಜೀವ್‌ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ವಿಚಾರದಲ್ಲಿ ಸ್ಪಷ್ಟವಾದಂತಹ ಕಾನೂನನ್ನು ರೂಪಿಸುವ ಸಲುವಾಗಿ ಸಂವಿಧಾನದ 73 ಮತ್ತು 74ನೇ ಕಲಂಗೆ ತಿದ್ದುಪಡಿಯನ್ನು ಮಾಡುವುದರ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕಡ್ಡಾಯಗೊಳಿಸಿ ಅಧಿಕಾರ ವಿಕೇಂದ್ರೀಕರಣದ ಮಹತ್ವವನ್ನು ಎತ್ತಿ ಹಿಡಿದರು. ಈ ಕಾನೂನಿನ ಪ್ರಕಾರ ನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಅಂದರೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಯಾವುದೇ ಕಾರಣಕ್ಕೂ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವುದನ್ನು ತಪ್ಪಿಸಬಾರದು, ಯಾವುದೇ ಸಂಸ್ಥೆಗೆ 6 ತಿಂಗಳಿಗಿಂತ ಹೆಚ್ಚಿನ ಕಾಲ ಆಡಳಿತಾಧಿಕಾರಿಯನ್ನು ನೇಮಿಸುವಂತಿಲ್ಲ, ಅದೂ ಸಹ ಅತ್ಯಗತ್ಯವಾದ ಸಂದರ್ಭಗಳಲ್ಲಿ ಮಾತ್ರ 6 ತಿಂಗಳುಗಳ ಕಾಲ ಚುನಾವಣೆಯನ್ನು ಮುಂದೂಡಬಹುದು ಎಂಬ ಸ್ಪಷ್ಟವಾದಂತಹ ಅಂಶಗಳಿದ್ದರೂ, ಕರ್ನಾಟಕದಲ್ಲಿ ಪಂಚಾಯತ್ ಚುನಾವಣೆಗಳು ನಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿ ಮಾಡದೆ ಸುಮಾರು 2 ವರ್ಷಗಳ ತನಕ ಚುನಾಯಿತ ಪ್ರತಿನಿಧಿಗಳ ಕೈಗೆ ಅಧಿಕಾರ ನೀಡದೆ ಸಂವಿಧಾನದ ತಿದ್ದುಪಡಿಗೆ ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡಲಾಗಿದೆ. ಅದೇ ರೀತಿಯಲ್ಲಿ ಬಿಬಿಎಂಪಿ ಚುನಾವಣೆಗಳು 5 ವರ್ಷಕ್ಕೊಮ್ಮೆ ನಡೆಯಬೇಕೆನ್ನುವ ಅರಿವಿದ್ದರೂ ವಾರ್ಡಿನ ಪುನರ್ ವಿಂಗಡಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮೀಸಲಾತಿಯ ನೆಪವನ್ನು ಮಾಡಿಕೊಂಡು ಮತ್ತೆ ಕೆಲವು ವರ್ಷಗಳ ಕಾಲ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಚುನಾಯಿತ ಪ್ರತಿನಿಧಿಗಳ ಕೈಗೆ ಅಧಿಕಾರ ನೀಡದಿರಲು ವ್ಯವಸ್ಥೆ ಮಾಡಲಾಗಿದೆ.

ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸುವಂತಹ ಆಯೋಗ, ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಮಾತ್ರ ಆಯಾ ರಾಜ್ಯ ಸರಕಾರಗಳ ಕೈಗೊಂಬೆಯಾಗಿ ದಿಟ್ಟತನವನ್ನು ಎಂದೂ ತೋರಿರುವುದಿಲ್ಲ. ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿಯನ್ನು ಪ್ರತಿ 25 ವರ್ಷಗಳಿಗೊಮ್ಮೆ ಪರಿಶೀಲಿಸಿ ಹೊಸ ಪಟ್ಟಿಯನ್ನು ಬಿಡುಗಡೆ ಮಾಡುವ ವ್ಯವಸ್ಥೆ ಇದೆ. ಇದಕ್ಕಾಗಿ ಸರ್ವಪಕ್ಷಗಳ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ಅವರ ಶಿಫಾರಸಿನ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸುತ್ತಾರೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನ್ಯಾಯಕ್ಕೆ ಅವಕಾಶವಿರುವುದಿಲ್ಲ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್‌ಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರ ಸಂಪೂರ್ಣವಾಗಿ ಆಯಾ ರಾಜ್ಯ ಸರಕಾರಗಳ ಹಿಡಿತದಲ್ಲೇ ಇರುವುದರಿಂದ ಪಕ್ಷಪಾತ ಹಾಗೂ ದ್ವೇಷದ ರಾಜಕಾರಣಕ್ಕೆ ಅವಕಾಶವಾಗುತ್ತದೆ.

ಆದುದರಿಂದ ಯಾವ ರೀತಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರದ ಸದಸ್ಯರಗಳನ್ನೊಳಗೊಂಡ ಸರ್ವಪಕ್ಷದ ಸಮಿತಿ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಚಾರದಲ್ಲಿ ಶಿಫಾರಸುಗಳನ್ನು ಮಾಡುತ್ತಾರೋ, ಅದೇ ರೀತಿಯಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಸರ್ವಪಕ್ಷಗಳ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ಮತದಾರರ ಪಟ್ಟಿಯ ಆಧಾರದ ಮೇಲೆ ಯಾವುದೇ ರೀತಿಯ ಅನ್ಯಾಯ ಮತ್ತು ಪಿತೂರಿಗಳಿಗೆ ಅವಕಾಶವಿಲ್ಲದೆ ಪುನರ್ ವಿಂಗಡಣೆ ಮತ್ತು ಮೀಸಲಾತಿ ರೂಪಿಸುವ ವ್ಯವಸ್ಥೆ ಜಾರಿಗೆ ತರಬೇಕು. ಇಲ್ಲದಿದ್ದರೆ ಸ್ಥಳೀಯ ಸಂಸ್ಥೆಯ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗವೇ ತನ್ನಲ್ಲಿಟ್ಟುಕೊಂಡು ತಾನೇ ಇವುಗಳನ್ನು ಮಾಡಬೇಕು. ಆಗ ಮಾತ್ರ ಅನ್ಯಾಯ, ಪಕ್ಷಪಾತ ಹಾಗೂ ಪಿತೂರಿಯ ರಾಜಕಾರಣಕ್ಕೆ ಅವಕಾಶಗಳು ಕಡಿಮೆಯಾಗುತ್ತವೆ. ಇಲ್ಲದಿದ್ದರೆ ಆಡಳಿತ ಪಕ್ಷಗಳು ಪ್ರಭಾವೀ ವ್ಯಕ್ತಿಗಳಿಗೆ ವಾರ್ಡ್‌ಗಳನ್ನು ಮೀಸಲಾತಿಯ ನೆಪದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದಂತೆ ವಂಚಿಸುತ್ತಾರೆ ಹಾಗೂ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮೀಸಲಾತಿ ನಿಗದಿಪಡಿಸುತ್ತಾರೆ. ಜೊತೆಗೆ ತಮ್ಮ ಪಕ್ಷದವರೇ ಗೆಲ್ಲಬೇಕೆಂಬ ಕಾರಣದಿಂದ ಅವೈಜ್ಞಾನಿಕವಾಗಿ ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡುತ್ತಾರೆ. ಒಟ್ಟಾರೆಯಾಗಿ ಸಂವಿಧಾನದ ತಿದ್ದುಪಡಿಗಳಿಗೆ ಬೆಲೆಯೇ ಸಿಗದೆ ಇರುವುದರಿಂದ ಯಾರಾದರೂ ನ್ಯಾಯಾಲಯಕ್ಕೆ ಹೋಗಿ ಸೂಕ್ತವಾದಂತಹ ನಿರ್ದೇಶನಗಳನ್ನು ರಾಜ್ಯ ಸರಕಾರಗಳಿಗೆ ಈ ವಿಚಾರದಲ್ಲಿ ಕೊಡಿಸುವುದು ಮತ್ತು ಸಂವಿಧಾನವನ್ನು ನಿರ್ಲಕ್ಷಿಸುವ ಸರಕಾರದ ಪ್ರತಿನಿಧಿಗಳಿಗೆ ನ್ಯಾಯಾಲಯ ಪಾಠ ಕಲಿಸಿದರೆ ಎಲ್ಲವೂ ಸರಿಯಾಗುತ್ತದೆ.  

Similar News