ನಾಗರಿಕ ಸೇವೆಯಲ್ಲೂ ಕೋಮುವಾದ ತುರುಕಿಸುವ ಪ್ರಯತ್ನ?

Update: 2020-09-11 19:30 GMT

ಪ್ರಶಾಂತ್ ಭೂಷಣ್ ಅದ್ಭುತವಾದ ರೀತಿಯಲ್ಲಿ ನ್ಯಾಯಾಂಗ ಕನ್ನಡಿಯಲ್ಲಿ ತನ್ನ ಮುಖವನ್ನು ತಾನು ನೋಡಿಕೊಳ್ಳುವಂತೆ ಮಾಡಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ನಡೆದಿರುವ ಎರಡು ಘಟನೆಗಳು ನಮ್ಮ ಸಮಾಜದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನ್ಯಾಯಾಂಗ ಒಂದು ಆಶಾಕಿರಣವಾಗಿ ಮೂಡಿ ಬಂದಿದೆ.: 1. ಕೊರೋನ (ಕೊರೋನ ಜಿಹಾದ್), ಕೊರೋನ ಬಾಂಬ್ ಹರಡುತ್ತಾರೆ ಎಂಬ ಆಪಾದನೆಗಳಿಂದ ತಬ್ಲೀಗಿ ಜಮಾಅತ್ ಸದಸ್ಯರನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. 2. ಸುದರ್ಶನ್ ಟಿವಿ ದ್ವೇಷಪೂರಿತ ಸಂದೇಶಗಳನ್ನು ಬಿತ್ತರಿಸುವ ಬಿಂದಾಸ್ ಬೋಲ್ ಟಿವಿ ಸರಣಿ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ನ್ಯಾಯಾಲಯಗಳು ತೀರ್ಪು ನೀಡಿವೆ. ಸುದರ್ಶನ್ ಟಿವಿಯ ಸಂಪಾದಕ ಸುರೇಶ್ ಚವಂಕೆ ತನ್ನ ಟಿವಿಯಲ್ಲಿ ಮುಸ್ಲಿಮರಿಂದ ಯುಪಿಎಸ್‌ಸಿ ಜಿಹಾದ್, ಬ್ಯೂರಾಕ್ರಸಿ ಜಿಹಾದ್ ನಡೆಯುತ್ತಿದೆ; ಅದನ್ನು ತಾನು ಬಯಲು ಮಾಡುವುದಾಗಿ ತನ್ನ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದರು. ಅವರ ಪ್ರಕಾರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಮುಸ್ಲಿಮರು ನಮ್ಮ ಬ್ಯೂರಾಕ್ರಸಿಯೊಳಕ್ಕೆ ನುಸುಳಿಕೊಳ್ಳುತ್ತಿದ್ದಾರೆ ಮತ್ತು ಆ ಮೂಲಕ ಅವರು ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗುತ್ತಾರೆ.

ಈ ಜಿಹಾದ್ ಮೂಲಕ ಮುಸ್ಲಿಮರು ಅಧಿಕಾರದ ಪ್ರತಿಷ್ಠಿತ ಹುದ್ದೆಗಳಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಚವಂಕೆ ತನ್ನ ಸೀರಿಯಲ್‌ನ 45 ಸೆಕೆಂಡ್‌ಗಳ ಒಂದು ಟೀಸರ್ ಮೂಲಕ ಪ್ರಕಟಿಸಿದ್ದರು. ಕುತೂಹಲದ ವಿಷಯವೆಂದರೆ ಪರೀಕ್ಷೆಯಲ್ಲಿ ಉತ್ತೀರ್ಣರಾದ 30 ಮಂದಿ ಅಭ್ಯರ್ಥಿಗಳಲ್ಲಿ 16 ಮಂದಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಮುಸ್ಲಿಮ್ ವಿದ್ಯಾರ್ಥಿಗಳು ಮತ್ತು 14 ಮಂದಿ ಹಿಂದೂ ವಿದ್ಯಾರ್ಥಿಗಳು. ಜಾಮಿಯಾ ವಿದ್ಯಾರ್ಥಿಗಳು ಈ ಧಾರಾವಾಹಿಗೆ ತಡೆ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋದರು. ಧಾರಾವಾಹಿ ಸಮಾಜದಲ್ಲಿ ದ್ವೇಷ ಹರಡುವ ಸಾಧ್ಯತೆ ಇದೆ ಎಂಬ ನೆಲೆಯಲ್ಲಿ ನ್ಯಾಯಾಲಯಗಳು ತಡೆಯಾಜ್ಞೆ ನೀಡಿದವು. ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು ಬರೆದ ಒಂದು ಜಂಟಿ ಪತ್ರದಲ್ಲಿ ತಮಗೆ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಸಂಬಂಧವಿಲ್ಲ, ‘‘ನಾಗರಿಕ ಸೇವೆಗಳಿಗೆ ಮುಸ್ಲಿಮರನ್ನು ನುಸುಳಿಸುವ ಒಂದು ಒಳಸಂಚು ನಡೆಯುತ್ತಿದೆ ಎಂದು ಆಪಾದಿಸುವುದಾಗಲಿ ಅಥವಾ ಯುಪಿಎಸ್‌ಸಿ ಜಿಹಾದ್ ಅಥವಾ ನಾಗರಿಕ ಸೇವೆಗಳ ಜಿಹಾದಿ ಎಂಬ ಶಬ್ದಗಳನ್ನು ಈ ನಿಟ್ಟಿನಲ್ಲಿ ಬಳಸುವುದಾಗಲಿ ಸಂಪೂರ್ಣವಾಗಿ ವಿಕೃತಿಯಲ್ಲದೆ ಬೇರೇನೂ ಅಲ್ಲ. ಇಂತಹ ಕೋಮುವಾದಿ ಹಾಗೂ ಬೇಜವಾಬ್ದಾರಿ ಹೇಳಿಕೆಗಳು ದ್ವೇಷ ಭಾಷಣಕ್ಕೆ ಸಮನಾಗಿವೆ ಮತ್ತು ಇಡೀ ಒಂದು ಸಮುದಾಯಕ್ಕೆ ಮಾನಹಾನಿ ಮಾಡುವಂತಹವುಗಳಾಗಿವೆ’’ ಎಂದು ಹೇಳಿದ್ದಾರೆ.
ಈಗ ನಿಜ ಸ್ಥಿತಿ ಏನಿದೆ ನೋಡೋಣ. ದೇಶದ 8,417 ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಲ್ಲಿ ಮುಸ್ಲಿಮರ ಪಾಲು ಶೇ. 3.46 ಮಾತ್ರ. 292 ಮಂದಿ ಮುಸ್ಲಿಂ ಅಧಿಕಾರಿಗಳಲ್ಲಿ, ನಾಗರಿಕ ಸೇವಾ ಪರೀಕ್ಷೆಗಳ ಮೂಲಕ ಆಯ್ಕೆಯಾದ 5,862 ಮಂದಿಯಲ್ಲಿ 160 ಮಂದಿ ಮುಸ್ಲಿಮರು. ಇತರ 132 ಮಂದಿ ಸೇವಾ ಹಿರಿತನ ಮತ್ತು ಸಾಧನೆಗಳ ಆಧಾರದಲ್ಲಿ ಐಎಎಸ್ ಅಥವಾ ಐಪಿಎಸ್ ಹುದ್ದೆಗಳಿಗೆ ಭಡ್ತಿ ಪಡೆದ 2,555 ಮಂದಿಯಲ್ಲಿ ಭಡ್ತಿ ಪಡೆದವರು.

ಹಾಗೆಯೇ 2019ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದ 829 ಮಂದಿ ಅಭ್ಯರ್ಥಿಗಳಲ್ಲಿ 35 ಮಂದಿ ಮುಸ್ಲಿಮರು. ಅಂದರೆ, ಒಟ್ಟು ಆಯ್ಕೆಯಾದವರಲ್ಲಿ 4.22 ಶೇಕಡಾ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಪ್ರತಿಶತ (2011ರ ಜನಗಣತಿಯ ಪ್ರಕಾರ) ಶೇ. 14.2 ಇದೆ.

ಮುಸ್ಲಿಂ ಅಭ್ಯರ್ಥಿಗಳಿಗೆ ಅರೇಬಿಕ್ ಭಾಷೆಯ ಆಯ್ಕೆ ನೀಡಿರುವುದರಿಂದ ಅವರು ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಎಂಬುದು ಸುದರ್ಶನ್ ಟಿವಿಯ ಮುಖ್ಯಸ್ಥ ಚವಂಕೆಯವರ ವಾದ. ಈ ವಾದದ ಪ್ರಕಾರ ಮುಸ್ಲಿಮರು ಅಧಿಕಾರದ ಅಥವಾ ಸವಲತ್ತಿನ ಯಾವುದೇ ಹುದ್ದೆಯಲ್ಲಿರಬಾರದು. ಅವರ ಮೆಜಾರಿಟೇರಿಯನ್ ರಾಜಕಾರಣ, ಅವರು ಹೀಗೆಯೇ ವಾದಿಸಬೇಕು ಹೀಗೆಯೇ ಹೇಳಬೇಕು ಎಂದು ಅವರಿಗೆ ಆದೇಶಿಸುತ್ತದೆ. ಹೀಗಾಗಿ ಚವಂಕೆ ಮತ್ತು ಅವರ ಗುಂಪಿನವರು, ಮುಸ್ಲಿಮರು ಯಾವುದೇ ಅಧಿಕಾರ ಮತ್ತು ಉನ್ನತ ಸ್ಥಾನಮಾನ ಹೊಂದಿರುವುದನ್ನು ಸಹಿಸಲಾರರು. ಚವಂಕೆಯಂತಹ ಹಿಂದೂ ರಾಷ್ಟ್ರೀಯವಾದಿಗಳ ಹಳದಿ ರೋಗದ ದೃಷ್ಟಿಕೋನವು ರಾಷ್ಟ್ರೀಯ ಆಡಳಿತದ ಪ್ರಕ್ರಿಯೆಗೆ ಒಂದು ಹೊಸ ಆಯಾಮವನ್ನು ಪರಿಚಯಿಸುತ್ತದೆ.

ಸರಕಾರಿ ಸೇವೆಗಳಲ್ಲಿ ಮುಸ್ಲಿಮರ ಪ್ರತಿಶತ ಅತ್ಯಂತ ಕಡಿಮೆಯಿದೆ. ಉನ್ನತ ಹುದ್ದೆಗಳಲ್ಲಿರುವ ಈ ನಾಲ್ಕು ಶೇಕಡಾ ಸರಾಸರಿ, ಸರಕಾರದ ಇತರ ಒಟ್ಟು ನೌಕರಿಗಳಲ್ಲಿ ಶೇ. 5-6 ಮಂದಿ ಮುಸ್ಲಿಮರಿರುವುದಕ್ಕೆ ಹೊಂದಿಕೊಂಡೇ ಇದೆ. ಅದಕ್ಕೆ ಮುಸ್ಲಿಮರ ಆರ್ಥಿಕ ಹಾಗೂ ಶೈಕ್ಷಣಿಕ ಮಟ್ಟದ ಜೊತೆಗೆ ಅವರ ವಿರುದ್ಧ ಸತತವಾಗಿ ಮತ್ತೆ ಮತ್ತೆ ನಡೆಯುವ ಹಿಂಸೆಯಿಂದ ಉಂಟಾಗುವ ಅಭದ್ರತೆ ಕೂಡ ಕಾರಣವಾಗಿದೆ.

ಅವರ ರಾಜಕೀಯ ಸ್ಥಿತಿ ಕೂಡ ಹದಗೆಡುತ್ತಲೇ ಬಂದಿದೆ. ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯ ಕಡಿಮೆಯಾಗುತ್ತಲೇ ಇದೆ.

ಚವಂಕೆ ಗುರಿಮಾಡಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯ ದೇಶದ ಪ್ರತಿಷ್ಠಿತ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ ಎಂಬುದನ್ನು ನಾವು ಗಮನಿಸಬೇಕು.

ಮುಸ್ಲಿಂ ಯುವಜನತೆ ತಮ್ಮ ಭವಿಷ್ಯದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಸಮಸ್ಯಾತ್ಮಕವಾಗಿದೆ. ತಾವು ಮುಸ್ಲಿಮರಾಗಿರುವುದರಿಂದ ತಮಗೆ ನೌಕರಿ ಸಿಗುವುದು ಇಷ್ಟೊಂದು ಕಷ್ಟವಾಗಿರುವಾಗ, ಶಿಕ್ಷಣದ ಬಗ್ಗೆ ಮತ್ತೆ ಯಾಕೆ ಅವರು ಅಷ್ಟೊಂದು ಚಿಂತಿಸಬೇಕು! ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ. ನಾಗರಿಕ ಸೇವೆಗಳ ಪ್ರಕ್ರಿಯೆಯಲ್ಲಿ ಕೋಮುವಾದಿ ಆಯಾಮವೊಂದನ್ನು ಸೇರಿಸುವ ಚವಂಕೆಯವರ ಪ್ರಯತ್ನವನ್ನು ತಡೆಯಬೇಕಾಗಿದೆ. ನ್ಯಾಯಾಲಯಗಳು ಈ ನಿಟ್ಟಿನಲ್ಲಿ ತಡೆಯಾಜ್ಞೆ ನೀಡಿರುವುದು ಭಾರತದ ಬಹುರೂಪಿ ಹಾಗೂ ವಿವಿಧತೆಗೆ ಉಳಿಯುವ ಅವಕಾಶವಿದೆ ಎಂಬ ಭರವಸೆ ಮೂಡಿಸಿದೆ.

(ಇದೀಗ ಸುದರ್ಶನ ಟಿವಿಯ ವಿವಾದಾತ್ಮಕ ಕಾರ್ಯಕ್ರಮದ ಪ್ರಸಾರವನ್ನು ಮುಂದುವರಿಸಲು ಕೇಂದ್ರ ಸರಕಾರ ಅವಕಾಶ ನೀಡಿದೆ ಹಾಗೂ ಇದಕ್ಕೆ ತಡೆ ನೀಡಲು ದಿಲ್ಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ) 

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News