ಪರೀಕ್ಷೆ ಇಲ್ಲದೇ ಪಾಸ್ ಮಾಡುವ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2020-09-14 10:53 GMT

ಬೆಂಗಳೂರು, ಸೆ.14: ಕೊರೋನ ಭೀತಿಯ ಹಿನ್ನೆಲೆಯಲ್ಲಿ 2019-20ರ ಶೈಕ್ಷಣಿಕ ಸಾಲಿನ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕೋರ್ಸ್ ಗಳ ಮಧ್ಯಂತರ ಸೆಮಿಸ್ಟರ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸಲು ಸರಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತು ರಾಜ್ಯ ಸರಕಾರ ಹೊರಡಿಸಿರುವ ಅದೇಶ ಪ್ರಶ್ನಿಸಿ, ನಗರದ ಎಸ್.ಪಿ.ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

ಹೈಕೋರ್ಟ್ ತನ್ನ ಆದೇಶದಲ್ಲಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಹೊರಡಿಸಿದ ಮಾರ್ಗಸೂಚಿ ಆಧರಿಸಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಮಧ್ಯಂತರ ಸೆಮಿಸ್ಟರ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಮತ್ತು ಹಿಂದಿನ ಸೆಮಿಸ್ಟರ್ ಅಂಕಗಳ (50:50) ಆಧಾರದ ಮೇಲೆ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸಲು ರಾಜ್ಯ ಸರಕಾರ ನಿರ್ಣಯ ಕೈಗೊಂಡಿದೆ. ರಾಜ್ಯದಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಮತ್ತವರ ಕುಟುಂಬದವರ ಆರೋಗ್ಯ, ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ, ಅವರ ಭವಿಷ್ಯದ ಪ್ರಗತಿ ಗಮನದಲ್ಲಿಟ್ಟುಕೊಂಡು ಸರಕಾರ ಈ ಆದೇಶ ಮಾಡಿದೆ ಎಂದು ಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಇಂತಹ ನಿರ್ಧಾರತೆ ತೆಗೆದುಕೊಳ್ಳಲು, ವಿವಿಗಳಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲು ರಾಜ್ಯ ಸರಕಾರ ಅಧಿಕಾರ ಹೊಂದಿದೆ. ಕೊರೋನನಂತಹ ಅಸಾಧಾರಣ ಸನ್ನಿವೇಶದಲ್ಲಿ ಸರಕಾರ ಕೈಗೊಂಡ ನಿರ್ಣಯದಲ್ಲಿ ತಪ್ಪು ಹುಡುಕಲು ಸಾಧ್ಯವಿಲ್ಲ. ಮೇಲಾಗಿ ಈ ವ್ಯವಸ್ಥೆ ಈ ವರ್ಷ ಮತ್ತು ಸೆಮಿಸ್ಟರ್ ಗೆ ಮಾತ್ರ ಸೀಮಿತವಾಗಿದೆ. ಇನ್ನು, ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳು ಪರೀಕ್ಷೆ ನಡೆಸುವ ವಿಚಾರದಲ್ಲಿ ತನ್ನದೇ ಆದ ವಿಧಾನವನ್ನು ಆಳವಡಿಸಿಕೊಂಡಿವೆ. ಹೀಗಾಗಿ ಎಲ್ಲ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮಧ್ಯೆ ಯಾವುದೇ ತಾರತಮ್ಯಕ್ಕೆ ಅವಕಾಶ ಕಲ್ಪಿಸದೆ ಮತ್ತು ಏಕರೂಪತೆ ಕಾಯ್ದುಕೊಳ್ಳಲು ಸರಕಾರ ಈ ನಿರ್ಣಯ ತೆಗೆದುಕೊಂಡಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News