ತಪ್ಪಿತಸ್ಥರ ತನಿಖೆ ನಡೆಯುತ್ತಿದೆಯೇ ಹೊರತು ಜಾತಿ-ಧರ್ಮದ ಆಧಾರದಲ್ಲಿ ಅಲ್ಲ: ಸಚಿವ ಸಿ.ಟಿ.ರವಿ

Update: 2020-09-14 11:49 GMT

ಬೆಂಗಳೂರು, ಸೆ. 14: ಮಾದಕ ದ್ರವ್ಯ (ಡ್ರಗ್ಸ್) ಪ್ರಕರಣದಲ್ಲಿ ಅಲ್ಪಸಂಖ್ಯಾತರ ಗುರಾಣಿ ಹಿಡಿದು ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು, ಶಾಸಕ ಝಮೀರ್ ಅಹ್ಮದ್ ಖಾನ್ ಹೇಳಿಕೆಗೆ ಇಂದಿಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾದಕ ವಸ್ತುಗಳ ಜಾಲ ಪ್ರಕರಣ ಸಂಬಂಧ ಸರಕಾರ ತನಿಖೆ ನಡೆಸುತ್ತಿದೆ. ಈ ದಂಧೆಯಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ಜಾತಿ, ಧರ್ಮದ ಪ್ರಶ್ನೆ ಬರುವುದಿಲ್ಲ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಯುತ್ತಿದೆಯೇ ಹೊರತು ಜಾತಿ-ಧರ್ಮದ ಆಧಾರದ ಮೇಲೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಕಳ್ಳನ ಹೆಂಡತಿ ಯಾವತ್ತಿದ್ದರೂ ಒಂದು ದಿನ..... ಆಗಲೇಬೇಕು' ಎಂದು ಉಲ್ಲೇಖಿಸಿದ ಸಿ.ಟಿ.ರವಿ, `ಕ್ಯಾಸಿನೋಗೆ ಹೋದರೆ ನೆಮ್ಮದಿ ಸಿಗುತ್ತದೆ' ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಅದು ಯಾವ ರೀತಿಯ ನೆಮ್ಮದಿ ಎಂದು ಅವರು ಸ್ಪಷ್ಟಪಡಿಸಬೇಕು. ತನಿಖಾಧಿಕಾರಿಗಳು ಮೊದಲು ಝಮೀರ್ ಅವರ ಪಾಸ್‍ಪೋರ್ಟ್ ಪರಿಶೀಲನೆ ನಡೆಸಬೇಕು. ಈ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದರು.

'ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ನಾನು ಮನೆ ವಾಚ್‍ಮ್ಯಾನ್ ಆಗಿ ಅವರ ಮನೆಯ ಗೇಟ್ ಕಾಯುತ್ತೇನೆ' ಎಂದು ಝಮೀರ್ ಹೇಳಿದ್ದರು. ಈ ಬಗ್ಗೆ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಅವರು ವಾಚ್‍ಮ್ಯಾನ್ ಆಗುವುದು ಯಾವಾಗ ಎಂದು ಪ್ರಶ್ನಿಸಿದ ಸಿ.ಟಿ. ರವಿ, ಡ್ರಗ್ಸ್ ಪ್ರಕರಣದಲ್ಲಿನ ಪ್ರಮುಖ ಆರೋಪಿ ಎನ್ನಲಾದ ಫಾಝಿಲ್ ಜತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಇರುವ ಫೋಟೋವನ್ನು ಪ್ರದರ್ಶಿಸಿ ಇದು ಏನು ಹೇಳುತ್ತದೆ ಎಂದು ಪ್ರಶ್ನಿಸಿದರು.

ಒಂದು ಫೋಟೋ ಜನ್ಮ ಜನ್ಮಾಂತರದ ಸಂಬಂಧ ಎಂದು ಹೇಳುತ್ತದೆ. ಸಿದ್ದರಾಮಯ್ಯ ಹಾಗೂ ಝಮೀರ್ ಅಹ್ಮದ್ ಖಾನ್ ಜತೆ ಫಾಝಿಲ್ ಆತ್ಮೀಯ ಸಂಬಂಧ ಹೊಂದಿದ್ದರೆಂಬುದನ್ನು ತೋರಿಸುತ್ತದೆ. ಆದರೆ, ಇವರೆ ಸರಕಾರದ ಮೇಲೆ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಪ್ರಕರಣದ ತನಿಖೆ ಹಂತದಲ್ಲಿ ಏನೂ ಹೇಳುವುದಿಲ್ಲ. ತನಿಖೆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News