ಸಿದ್ದರಾಮಯ್ಯ ತಮ್ಮ ವ್ಯಕ್ತಿತ್ವವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ: ಸಚಿವ ಜಗದೀಶ್ ಶೆಟ್ಟರ್

Update: 2020-09-14 13:05 GMT

ಬೆಂಗಳೂರು, ಸೆ.14: ಮಾಜಿ ಸಚಿವ ಝಮೀರ್ ಅಹ್ಮದ್ ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ವ್ಯಕ್ತಿತ್ವವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸೋಮವಾರ ಧಾರವಾಡದಲ್ಲಿ ಮಾತನಾಡಿದ ಅವರು, ಕ್ಯಾಸಿನೋಗೂ ಹೋಗಬಾರದು, ಜೂಜು ಆಡಬಾರದು ಎಂದು ಸಿದ್ದರಾಮಯ್ಯ ಹೇಳಬೇಕಿತ್ತು. ಆದರೆ, ಝಮೀರ್ ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಅಂತಾ ಹೇಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರ, ಸಮ್ಮಿಶ್ರ ಸರಕಾರ ಇದ್ದಾಗ ಇದೆಲ್ಲ ಹೊರ ಬರಲಿಲ್ಲ, ಇವರು ಅಧಿಕಾರದಲ್ಲಿದ್ದಾಗ ಅದಕ್ಕೆಲ್ಲ ರಕ್ಷಣೆ ಕೊಟ್ಟಿದ್ದರು ಎಂದು ಆರೋಪ ಮಾಡಿದ ಸಚಿವರು, ನಮ್ಮ ಸರಕಾರ ಬಂದ ಮೇಲೆ ಎಲ್ಲವೂ ಹೊರ ಬರುತ್ತಾ ಇದೆ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ ಅವರು. ಡ್ರಗ್ಸ್ ಪ್ರಕರಣದಲ್ಲಿ ಬಹಳ ಜನ ಹೊರ ಬರುತ್ತಾರೆ ಎಂದು ತಿಳಿಸಿದರು.

ರಾಜಕೀಯ ಪಕ್ಷದವರು ಡ್ರಗ್ಸ್ ಕೇಸ್‍ನಲ್ಲಿದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆಯ ನೀಡಿದ ಸಚಿವ ಜಗದೀಶ್ ಶೆಟ್ಟರ್, ಹೆಸರು ಗೊತ್ತಿದ್ದರೆ ಹೇಳಿ ಬಿಡಿ. ಅವರ ಹೆಸರು ಕೊಡಿ, ನಾನೇ ತನಿಖೆ ಮಾಡಿ ಅಂತಾ ಹೇಳುತ್ತೇನೆ ಎಂದು ಪತ್ರಕರ್ತರಿಗೆ ತಿಳಿಸಿದರು.

ಜಿ.ಪಂ. ಸದ್ಯದ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಬಿಜೆಪಿಯವರು ಸಿಬಿಐಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾರು ತಪ್ಪು ಮಾಡಿಲ್ಲವೋ ಅವರು ತನಿಖೆಗೆ ಹೆದರುವ ಪ್ರಶ್ನೆಯೇ ಇಲ್ಲ, ಝಮೀರ್ ತಪ್ಪು ಮಾಡಿಲ್ಲ ಅಂದರೆ ಯಾಕೆ ಹೆದರಬೇಕು, ಯೋಗೀಶ್ ಗೌಡ ಹತ್ಯೆಯಲ್ಲ, ಯಾವುದೇ ಪ್ರಕರಣ ಇದ್ದರೂ ತಪ್ಪು ಮಾಡದೇ ಇರುವವರು ಹೆದರುವ ಪ್ರಶ್ನೆ ಇಲ್ಲ ಎಂದರು.

ದಿಲ್ಲಿಗೆ ಹೋಗಿ ಕೇಂದ್ರ ನಾಯಕರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ನನ್ನ ಇಲಾಖೆ ವಿಚಾರವಾಗಿ ಕೇಂದ್ರ ಸಚಿವರ ಭೇಟಿ ಮಾಡಿದ್ದೆ. ಅದನ್ನು ಬಿಟ್ಟು ಮಾಧ್ಯಮದವರೇ ಏನೇನೊ ಸುದ್ದಿ ಮಾಡುತ್ತಿದ್ದಾರೆ ಎಂದರು.

ಹೊಸ ಕೈಗಾರಿಕೆಗಳನ್ನು ತರಲು ಚರ್ಚೆ ಮಾಡಿ, ಅವರಿಗೆ ಬೇಕಾದ ಭೂಮಿ ನೀಡಲು ಚಿಂತನೆ ನಡೆದಿದೆ, ಈ ವಿಷಯವಾಗಿ ನಾನು ದೆಹಲಿಗೆ ಹೋಗಿದ್ದೆ ಹೊರತಾಗಿ ಬೇರೆ ಯಾವ ವಿಚಾರವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News