ವೈದ್ಯಕೀಯ ಲೋಕದಲ್ಲಿ ಹೊಸ ಭರವಸೆ: ಕೊರೋನ ಗೆದ್ದ 980 ಗ್ರಾಂ ತೂಕದ ನವಜಾತ ಶಿಶು

Update: 2020-09-16 11:33 GMT

ಬೆಂಗಳೂರು, ಸೆ.16: ಕೊರೋನ ಸೋಂಕಿಗೆ ತುತ್ತಾಗಿದ್ದ 980 ಗ್ರಾಂ ತೂಕದ ಅವಧಿಪೂರ್ವ ನವಜಾತ ಶಿಶು ಮಾರಕ ಕೊರೋನ ವಿರುದ್ಧ ಗೆದ್ದು ಎಲ್ಲರಿಗೂ ಮಾದರಿಯಾಗಿದೆ. ಅಲ್ಲದೇ ವೈದ್ಯಕೀಯ ಲೋಕದಲ್ಲಿ ಇದು ಹೊಸ ಭರವಸೆಯ ಆಶಾಕಿರಣ ಮೂಡಿಸಿದೆ.

ಗರ್ಭಿಣಿ ಮಹಿಳೆಯನ್ನು ಕಳೆದ ಆಗಸ್ಟ್ 13ರಂದು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಮಗುವಿಗೆ ಜನ್ಮ ನೀಡಿದ್ದರು. ಈ ಹೆಣ್ಣು ಮಗು ಐದು ದಿನಗಳ ಕಾಲ, ಮಕ್ಕಳ ಪ್ರತ್ಯೇಕ ವಾರ್ಡ್ ನಲ್ಲಿತ್ತು. ನಂತರ ಕೊರೋನ ಸೋಂಕು ದೃಢಪಟ್ಟಿದ್ದರಿಂದ ಆ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಯ ಅಪಘಾತ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಮಗುವಿಗೆ ತೀವ್ರವಾದ ಆರೋಗ್ಯ ಸಮಸ್ಯೆಗಳಿದ್ದುದರಿಂದ, ಆರೋಗ್ಯ ಚೇತರಿಕೆ ಸವಾಲಿನದ್ದಾಗಿತ್ತು. ಆದರೆ ಈ ವೇಳೆ ಮಗುವಿನ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಈ ವೇಳೆ ಬಂದ ವರದಿಯಲ್ಲಿ ಮಗುವಿಗೆ ಲಕ್ಷಣ ರಹಿತ ಕೊರೋನ ಸೋಂಕು ದೃಢಪಟ್ಟಿತ್ತು. ಹಾಗಾಗಿ ಮಗುವಿಗೆ ಕೊರೋನ ಚಿಕಿತ್ಸೆ ನೀಡಲಾಯಿತು.

ಮಗುವು ಟಿಸಿಸಿನಲ್ಲಿದ್ದಾಗ ಎಕ್ಸ್‍ಪ್ರೆಸ್ ಬ್ರೆಸ್ಟ್ ಫೀಡಿಂಗ್ ಮುಖಾಂತರ ಮಗುವಿಗೆ ಹಾಲುಣಿಸಲಾಗುತ್ತಿತ್ತು ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಇದೀಗ ಮಗುವಿನ ಸೋಂಕು ನಿವಾರಣೆಯಾಗಿದ್ದು, ಕಡಿಮೆ ತೂಕದ ಜನನ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಮಲ್ಲೇಶ್ ತಿಳಿಸಿದ್ದಾರೆ.

ಮಗು ಆಸ್ಪತ್ರೆಗೆ ದಾಖಲಾದ ಆರಂಭದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಹಾಗಾಗಿ, ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ. ಡಿಸ್ಚಾರ್ಜ್ ಸಮಯದಲ್ಲಿ, ಮಗು 1.2 ಕೆಜಿ ತೂಕವಿತ್ತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News