ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ: ವಿಧಾನಪರಿಷತ್ ಸದಸ್ಯರ ಜತೆ ಡಿಸಿಎಂ ಅಶ್ವತ್ಥನಾರಾಯಣ ಚರ್ಚೆ

Update: 2020-09-16 13:07 GMT

ಬೆಂಗಳೂರು, ಸೆ.16: ಸೋಮವಾರದಿಂದ ವಿಧಾನಮಂಡಲ ಕಲಾಪ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಎಲ್ಲ ಪಕ್ಷಗಳ ಸದಸ್ಯರ ಜತೆ ವಿಕಾಸಸೌಧದಲ್ಲಿ ಮಹತ್ವದ ಮಾತುಕತೆ ನಡೆಸಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ ಜಾರಿಗೆ ತಂದಿರುವ ವಿವಿಧ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು.

ಕೋವಿಡ್ ಬರುವ ಮುನ್ನ ಹಾಗೂ ಕೋವಿಡ್ ನಂತರ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ಆನ್‍ಲೈನ್ ಅಫಿಲಿಯೇಷನ್, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕ್ರಮ ಸೇರಿ ಎಲ್ಲ ಕಾರ್ಯಕ್ರಮಗಳ ಬಗ್ಗೆ ಪರಿಷತ್ ಸದಸ್ಯರಿಗೆ ವಿವರ ನೀಡಿದ ಉಪ ಮುಖ್ಯಮಂತ್ರಿ, ಕೋವಿಡ್ ಹಿನ್ನೆಲೆಯಲ್ಲಿ ಡಿಜಿಟಲ್ ಲರ್ನಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಅದು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು.

ವರ್ಗಾವಣೆ ನೀತಿ ಬದಲು: ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಉಪನ್ಯಾಸಕರ ವರ್ಗಾವಣೆಯ ನಿಯಮಗಳನ್ನು ಬದಲಿಸಲಾಗುವುದು. ಈಗಿರುವ 2016ರ ವರ್ಗಾವಣೆ ಕಾಯ್ದೆಯನ್ನು ವಾಪಸ್ ಪಡೆದು ಸೂಕ್ತವಾದ ತಿದ್ದುಪಡಿಗಳೊಂದಿಗೆ ಹೊಸ ನಿಯಮಗಳನ್ನು ತರಲಾಗುವುದು ಎಂದು ಅವರು ಹೇಳಿದರು.

ಕಳೆದ ಅಧಿವೇಶನದಲ್ಲಿಯೆ ಇದರಲ್ಲಿ ಕೆಲ ತಿದ್ದುಪಡಿಗಳನ್ನು ಮಾಡುವ ಉದ್ದೇಶವಿತ್ತು. ಆದರೆ, ಆ ಕಾಯ್ದೆಯಲ್ಲಿ ಹಲವಾರು ದೋಷಗಳಿದ್ದ ಕಾರಣ ಇಡೀ ಕಾಯ್ದೆಯನ್ನೆ ವಾಪಸ್ ಪಡೆದು ಹೊಸ ನಿಯಮ ರೂಪಿಸಲು ನಿರ್ಧರಿಸಲಾಗಿದೆ. ಹೀಗೆ ಮಾಡುವುದರಿಂದ ವರ್ಗಾವಣೆ ನಿಯಮಗಳು ಸರಳವಾಗಿರುತ್ತವೆ, ಗೊಂದಲಗಳು ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಈಗಾಗಲೇ ಈ ಕಾಯ್ದೆಯ ಬಗ್ಗೆ ನಿಮ್ಮಿಂದಲೂ ಸಲಹೆ ಪಡೆಯಲಾಗಿದೆ. ಅದೇ ರೀತಿ ಶಿಕ್ಷಕರ ಸಂಘದ ಪದಾಧಿಕಾರಿಗಳಿಂದಲೂ ಸಲಹೆಗಳನ್ನು ಪಡೆಯಲಾಗಿದೆ. ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿಯೇ ಮಂಡಿಸಲಾಗುವುದು. ಬಳಿಕ ಅದಕ್ಕೆ ಬರುವ ಆಕ್ಷೇಪ ಮತ್ತಿತರೆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಯಾಗಿ ಜಾರಿಗೆ ತರಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಅನುಭವಿ ಅಧಿಕಾರಿಗಳ ನೇಮಕ: ವಿಶ್ವವಿದ್ಯಾಲಯಗಳಲ್ಲಿನ ಆಡಳಿತಕ್ಕೆ ಮತ್ತಷ್ಟು ಚುರುಕು ನೀಡುವ ಉದ್ದೇಶದಿಂದ ಎಲ್ಲ ವಿವಿಗಳ ರಿಜಿಸ್ಟ್ರಾರ್ ಹುದ್ದೆಗಳಿಗೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲು ಸುಗ್ರೀವಾಜ್ಞೆ ತರಲಾಗಿದೆ. ಅದಕ್ಕೆ ಈ ಅಧಿವೇಶನದಲ್ಲಿಯೇ ಒಪ್ಪಿಗೆ ಪಡೆಯಲಾಗುವುದು ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನು ತರುವುದು ಉತ್ತಮ ಯೋಚನೆ. ಆದರೆ, ಐಪಿಎಸ್ ಮತ್ತು ಐಎಫ್‍ಎಸ್ ಅಧಿಕಾರಿಗಳನ್ನು ದಯವಿಟ್ಟು ನೇಮಕ ಮಾಡಬೇಡಿ ಎಂದರು.

ಅಲ್ಲದೆ, ವಿವಿಗಳಲ್ಲಿ ಅಧ್ಯಾಪಕರಿಂದ ಮೊದಲಗೊಂಡು ಎಲ್ಲ ಹಂತಗಳ ನೇಮಕಾತಿಗಾಗಿ ಒಂದು ಕೇಂದ್ರೀಕೃತ ಸೆಲ್ ಮಾಡಿ. ವಿವಿ ಮಟ್ಟದಲ್ಲಿಯೇ ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಬೇಡಿ. ಹೀಗೆ ಮಾಡುವುದರಿಂದ ಎಲ್ಲ ವಿವಿಗಳಲ್ಲೂ ರಾಜಕಾರಣಿಗಳ ಹಸ್ತಕ್ಷೇಹ ಬಹುತೇಕ ನಿಲ್ಲುತ್ತದೆ. ಜತೆಗೆ ಭಡ್ತಿ ನೀಡುವಾಗ ಸೇವಾ ಹಿರಿತನಕ್ಕಿಂತ ಕಾರ್ಯನಿರ್ವಹಣೆಯ ದಕ್ಷತೆಯನ್ನು ಪರಿಗಣಿಸಿ ಕೊಡಬೇಕು ಹಾಗೂ ವಿವಿಗಳಲ್ಲಿ ಮೂಲಭೂತ ಸೌಕರ್ಯ, ಕಟ್ಟಡಗಳ ನಿರ್ಮಾಣದ ಕೆಲಸವನ್ನು ವಿವಿಗಳ ಆಡಳಿತದಿಂದ ಹೊರಗೆ ತರಬೇಕು ಎಂದು ಅವರು ಸಲಹೆ ನೀಡಿದರು.

ವಿವಿಗಳಲ್ಲಿ ಅನಗತ್ಯ ಖರೀದಿಗಳಿಗೆ ಕಡಿವಾಣ ಹಾಕಬೇಕು. ಅಗತ್ಯವಿಲ್ಲದ ಸಾಫ್ಟ್ ವೇರ್ ಖರೀದಿ, ಕಂಪ್ಯೂಟರುಗಳ ಖರೀದಿ ಇತ್ಯಾದಿಗಳ ಮೇಲೆ ತೀವ್ರ ನಿಗಾ ನಿಡಬೇಕು. ಇದರಿಂದ ವಿವಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದ ಅಂಶವನ್ನು ಕೆಲಸ ಸದಸ್ಯರು ಉಪ ಮುಖ್ಯಮಂತ್ರಿಯ ಗಮನಕ್ಕೆ ತಂದರು.

ಉಪ ಕುಲಪತಿ ನೇಮಕದಲ್ಲಿ ಗುಣಮಟ್ಟವನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಅದಕ್ಕೆ ಉತ್ತಮವಾದ ಮಾನದಂಡವನ್ನು ರೂಪಿಸಿ. ಅದಕ್ಕೆ ಅಗತ್ಯಬಿದ್ದರೆ ತಜ್ಞರ ಸಮಿತಿಯನ್ನು ರಚಿಸಿ ಎಂದು ಪರಿಷತ್ ಸದಸ್ಯರು ಸಲಹೆ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಅರುಣ್ ಶಹಾಪುರ, ಅ. ದೇವೇಗೌಡ, ತಾರಾ ಅನುರಾಧ, ಹನುಮಂತ್ ನಿರಾಣಿ, ಮರಿತಿಬ್ಬೆಗೌಡ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News