ಡ್ರಗ್ಸ್ ದಂಧೆ ಆರೋಪ: ಸಿಸಿಬಿಯಿಂದ ಸತತ ನಾಲ್ಕು ಗಂಟೆಗಳ ಕಾಲ ದಿಗಂತ್ -ಐಂದ್ರಿತಾ ರೇ ವಿಚಾರಣೆ

Update: 2020-09-16 13:48 GMT

ಬೆಂಗಳೂರು, ಸೆ.16: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಸಿಬಿಯಿಂದ ನೋಟಿಸ್ ಪಡೆದಿದ್ದ ನಟ ದಿಗಂತ್ ಹಾಗೂ ಅವರ ಪತ್ನಿ ಐಂದ್ರಿತಾ ರೇ ಅವರನ್ನು ಸತತ ನಾಲ್ಕು ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಿ ಕೆಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದರು.

ಬೆಳಗ್ಗೆ 11 ಗಂಟೆಗೆ ದಿಗಂತ್ ಹಾಗೂ ಐಂದ್ರಿತಾ ರೇ ಅವರು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಗೆ ಆಗಮಿಸಿದರು. ಬಳಿಕ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.

ಸುಮಾರು ನಾಲ್ಕು ಗಂಟೆಗಳ ಕಾಲ ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ದಿಗಂತ್ ಹಾಗೂ ಐಂದ್ರಿತಾ ರೇ ಅವರು ಇನ್ನು ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಸಮಯಾವಕಾಶ ಕೇಳಿದ್ದಾರೆ. ಮೊದಲ ಹಂತದ ವಿಚಾರಣೆ ಪೂರ್ಣಗೊಂಡಿದ್ದರಿಂದ ಪುನಃ ವಿಚಾರಣೆಗೆ ಕರೆದರೆ ಹಾಜರಾಗಬೇಕೆಂದು ತಿಳಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ವಿಚಾರಣೆ ವೇಳೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜತೆ ದಿಗಂತ್ ಮತ್ತು ಐಂದ್ರಿತಾ ರೇ ಇರುವ ಫೋಟೋಗಳನ್ನು ತನಿಖಾಧಿಕಾರಿಗಳು ಅವರಿಗೆ ತೋರಿಸಿ ಇವರ ಪರಿಚಯ ನಿಮಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಡ್ರಗ್ಸ್ ಜಾಲದಲ್ಲಿ ನಿಮ್ಮ ಹೆಸರುಗಳೂ ಕೇಳಿ ಬರುತ್ತಿವೆ, ಇದಕ್ಕೆ ನೀವು ಏನು ಹೇಳುತ್ತೀರಿ. ಆದಿತ್ಯ ಆಳ್ವಾ, ವಿರೇನ್ ಖನ್ನಾ, ಶೇಖ್ ಫಾಝಿಲ್ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ನೀವು ಹೋಗುತ್ತಿದ್ದರೆ, ಡ್ರಗ್ಸ್ ಜಾಲದಲ್ಲಿ ಬಂಧಿಸಿರುವ ಆರೋಪಿಗಳ ಬಗ್ಗೆ ನಿಮಗೆ ಪರಿಚಯವಿದೆಯೇ ಹಾಗೂ ರವಿಶಂಕರ್, ರಾಹುಲ್ ನಿಮಗೆ ಹೇಗೆ ಪರಿಚಯ ಎಂದು ಪ್ರಶ್ನಿಸಿದ್ದಾರೆ.

‘ಸಿಸಿಬಿ ಅಧಿಕಾರಿಗಳ ತನಿಖೆಗೆ ನಾವು ಸಹಕಾರ ನೀಡುತ್ತೇವೆ. ಮತ್ತೊಂದು ಬಾರಿ ನೋಟಿಸ್ ಜಾರಿಗೊಳಿಸಿದರೆ ವಿಚಾರಣೆಗೆ ಹಾಜರಾಗುತ್ತೇವೆ.’

-ದಿಗಂತ್, ನಟ

ನಟ ದಿಗಂತ್, ಅವರ ಪತ್ನಿ ಐಂದ್ರಿತಾ ರೇ ಅವರು ವಿಚಾರಣೆಗೆ ಸಂಪೂರ್ಣ ಉತ್ತರ ನೀಡಿದ್ದಾರೆ. ಇನ್ನು ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಸಮಯಾವಕಾಶ ಕೇಳಿದ್ದಾರೆ.’

-ಸಂದೀಪ್ ಪಾಟೀಲ್, ಸಿಸಿಬಿ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News